ನವದೆಹಲಿ, ಫೆ.11- ಲೋಕಸಭೆಯಲ್ಲಿ ಇಂದು ಕರ್ನಾಟಕದಲ್ಲಿ ಬಿಜೆಪಿ ನಡೆಸುತ್ತಿದೇ ಎನ್ನಲಾದ ಆಪರೇಷನ್ ಕಮಲ ಪ್ರತಿಧ್ವನಿಸಿ ಬಾರೀ ಗದ್ದಲ ಮತ್ತು ಕೋಲಾಹಲಕ್ಕೆ ಕಾರಣವಾಯಿತು. ಇದರಿಂದಾಗಿ ಕಲಾಪಕ್ಕೆ ಅಡ್ಡಿಯಾಗಿ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಸಂಸತ್ತಿನ ಬಜೆಟ್ ಅಧಿವೇಶನದ ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಕೆ.ಸಿ.ವೇಣುಗೋಪಾಲ ಕರ್ನಾಟಕದಲ್ಲಿ ಶಾಸಕರನ್ನು ಖರೀದಿಸಲು ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಪರೇಷನ್ ಕಮಲದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ಹಣದ ಆಮೀಷವೊಡ್ಡುತ್ತಿದೆ ಇದರಲ್ಲಿ ಬಿಜೆಪಿ ಉನ್ನತ ನಾಯಕರು ಶಾಮೀಲಾಗಿದ್ದಾರೆ ಎಂದು ವೇಣುಗೋಪಾಲ ಆಪಾದಿಸಿದಾಗ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಕುದುರೆ ವ್ಯಾಪಾರ ಎಂದು ಘೋಷಣೆ ಇದ್ದ ಫಲಕಗಳನ್ನು ಹಿಡಿದು ಸ್ಪೀಕರ್ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದರು. ಇದಕ್ಕೆ ಡಿಡಿಪಿ ಮತ್ತು ಟಿಎಂಸಿ ಸದಸ್ಯರು ಬೆಂಬಲ ನೀಡಿದರು.
ಸದನದಲ್ಲಿ ಗದ್ದಲ-ಕೋಲಾಹಲ ವಾತಾವರಣ ನಿರ್ಮಾಣವಾದರಿಂದ ಸ್ಪೀಕರ್ ಸುಮಿತ್ರ ಮಹಾಜನ್ ಮಧ್ಯಾಹ್ನ 12ಗಂಟೆ ಮುಂದೂಡಿದರು.