ಬೆಂಗಳೂರು, ಫೆ.9- ನಿನ್ನೆ ಶಾಸಕಾಂಗ ಸಭೆಗೆ ಹಾಜರಾಗದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಇಂದು ಬೆಳಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗಬೇಕು.ಇಲ್ಲವಾದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಲಾಗಿತ್ತು.
ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಅವರು ಗೈರು ಹಾಜರಾಗಿ ತಮ್ಮ ಗೈರು ಹಾಜರಿಗೆ ಕಾರಣಗಳನ್ನು ನೀಡಿ ಪತ್ರ ಬರೆದು ವಿನಾಯ್ತಿ ನೀಡುವಂತೆ ಮನವಿ ಮಾಡಿದ್ದರು.
ಅದೇ ಸಂದರ್ಭದಲ್ಲಿ ರೋಷನ್ಬೇಗ್ ಹಾಗೂ ಬಿ.ಸಿ.ಪಾಟೀಲ್ ಅವರೂ ಗೈರು ಹಾಜರಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ರೋಷನ್ಬೇಗ್ ಅವರು ದೆಹಲಿಯಲ್ಲಿ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿದ್ದರಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದರು.
ಬಿ.ಸಿ.ಪಾಟೀಲ್ ತಾವು ಬೆಂಗಳೂರಿನಲ್ಲಿ ಇಲ್ಲದೆ ಇರುವುದರಿಂದ ತಾವು ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ದೂರವಾಣಿ ಮೂಲಕ ಮಾಹಿತಿ ನೀಡಿದ್ದಲ್ಲದೆ, ಮಧ್ಯಾಹ್ನದ ವೇಳೆಗೆ ಬಂದು ತಮ್ಮನ್ನು ಭೇಟಿ ಮಾಡುವುದಾಗಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು.
ಆದರೆ, ನಿನ್ನೆ ಬಿ.ಸಿ.ಪಾಟೀಲ್ ಬಂದಿರಲಿಲ್ಲ. ಇದರಿಂದ ಹಲವಾರು ಅನುಮಾನಗಳು ತಲೆ ಎತ್ತಿದ್ದವು. ಬಿ.ಸಿ.ಪಾಟೀಲ್ ಮುಂಬೈಗೆ ತೆರಳಿದ್ದಾರೆ, ಅತೃಪ್ತ ನಾಲ್ಕು ಮಂದಿ ಶಾಸಕರ ಜತೆ ಸೇರಿಕೊಂಡಿದ್ದಾರೆ ಎಂಬೆಲ್ಲಾ ವದಂತಿಗಳು ಹರಡಲಾರಂಭಿಸಿದ್ದವು.
ದೆಹಲಿಗೆ ತೆರಳುತ್ತಿರುವ ಸಿದ್ದರಾಮಯ್ಯ ಅವರನ್ನು ಇಂದು ಬೆಳಗ್ಗೆ ಬಿ.ಸಿ.ಪಾಟೀಲ್ ಅವರು ಭೇಟಿ ಮಾಡಿದ್ದಾರೆ. ಖುದ್ದಾಗಿ ಸಿದ್ದರಾಮಯ್ಯ ಅವರ ಸರ್ಕಾರಿ ಬಂಗ್ಲೆ ಕಾವೇರಿಗೆ ಆಗಮಿಸಿದ ಬಿ.ಸಿ.ಪಾಟೀಲ್ ತಮ್ಮ ಗೈರು ಹಾಜರಿಗೆ ವಿವರಣೆ ನೀಡಿದ್ದಾರೆ.
ನಂತರ ಸುದ್ದಿಗಾರರ ಜತೆ ಮಾತನಾಡಿರುವ ಅವರು, ತಾವು ಮುಂಬೈಗೆ ಹೋಗಿಲ್ಲ. ಯಾವ ಅತೃಪ್ತರ ಜತೆಯೂ ಕೈ ಜೋಡಿಸಿಲ್ಲ. ಅನಗತ್ಯವಾದ ಇಂತಹ ವದಂತಿಗಳನ್ನು ನಂಬಬೇಡಿ. ನಾನು ಕಾಂಗ್ರೆಸ್ನಲ್ಲೇ ಇದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ. ಹಿರೇಕೆರೂರು ಕ್ಷೇತ್ರದ ಜನರ ಹಣೆಬರಹವೇ ಸರಿಯಿಲ್ಲ. ಸಚಿವ ಸ್ಥಾನ ಸಿಗದೇ ಇರುವ ಹಿನ್ನೆಲೆಯಲ್ಲಿ ನನಗೆ ಅಸಮಾಧಾನ ಇರುವುದು ನಿಜ. ಹಾಗೆಂದ ಮಾತ್ರಕ್ಕೆ ಪಕ್ಷ ಬಿಟ್ಟು ಹೋಗುವುದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ತಮ್ಮ ಆಯ್ಕೆಗಳಲ್ಲ ಎಂದು ಹೇಳಿದ್ದಾರೆ.
ತಾವು ಮುಂಬೈಗೆ ಹೋಗುವುದಿಲ್ಲ. ಕ್ಷೇತ್ರಕ್ಕೆ ಹೋಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.