ಬೆಂಗಳೂರು, ಫೆ.8-ರಸ್ತೆ ಸುರಕ್ಷತೆ ಸಪ್ತಾಹ ಕೇವಲ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರಲ್ಲೇ ಅರ್ಥ ಕಳೆದುಕೊಳ್ಳಬಾರದು.ಅದರ ಉದ್ದೇಶ ಮತ್ತು ಅನುಷ್ಠಾನದಲ್ಲಿ ಸಂಸ್ಥೆಯ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಪಾತ್ರ ಬಹಳ ಮುಖ್ಯ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್ ತಿಳಿಸಿದ್ದಾರೆ.
ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಥೆಯ ಬಸ್ಸುಗಳಲ್ಲಿ ಸುರಕ್ಷತೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಸಪ್ತಾಹದ ಅಂಗವಾಗಿ ಬೆಂಗಳೂರು ಕೇಂದ್ರೀಯ ವಿಭಾಗ ವತಿಯಿಂದ ಬದುಕಿ-ಬದುಕಿಸಿ ಶೀರ್ಷಿಕೆಯಡಿ ಬೀದಿನಾಟಕವನ್ನು ಬಸ್ ನಿಲ್ದಾಣಗಳಲ್ಲಿ ಹಮ್ಮಿಕೊಳ್ಳುವಂತೆ ವ್ಯವಸ್ಥಾಪಕರು ಸೂಚಿಸಿದರು.
ಕೆಎಸ್ಆರ್ಟಿಸಿ ಬೆಂಗಳೂರು ಕೇಂದ್ರ ವಿಭಾಗ ಹಾಗೂ ಸಂಚಾರಿ ಪೊಲೀಸ್ ದಕ್ಷಿಣ ವಿಭಾಗ(ವಿಲ್ಸನ್ ಗಾರ್ಡನ್) ಜಂಟಿಯಾಗಿ ರಸ್ತೆ ಸುರಕ್ಷತಾ ಕಾಲ್ನಡಿಗೆ ಜಾಥಾವನ್ನು ಲಾಲ್ಬಾಗ್ ಮುಖ್ಯದ್ವಾರದಿಂದ ರಿಚ್ಮಂಡ್ ರಸ್ತೆವರೆಗೂ ಆಯೋಜಿಸಲಾಗಿತ್ತು.
ನಿಗಮದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಜಾಗೃತಿಗಾಗಿ ನಿಧಾನ! ನಿಮಗಾಗಿ ಕಾಯುತ್ತಿದ್ದಾರೆ ನಿಮ್ಮವರು ಶೀರ್ಷಿಕೆಯ ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಯಿತು.
ಸಂಚಾರ ನಿಯಮ, ರಸ್ತೆ ಸುರಕ್ಷತೆ ಕುರಿತಂತೆ ಹಲವಾರು ಕಾರ್ಯಕ್ರಮ ಹಾಗೂ ಬೀದಿನಾಟಕಗಳನ್ನು ನಿಗಮದಿಂದ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಉಪಪೊಲೀಸ್ ಆಯುಕ್ತ ಕೆ.ವಿ.ಜಗದೀಶ್ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.