ಬೆಂಗಳೂರು,ಮಾ.13- ಡಿಜಿಟಲ್ ಸರ್ವೀಸ್ ಸಂಸ್ಥೆಗಳೊಂದಿಗೆ ಉಂಟಾಗಿದ್ದ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಈ ವಾರದಿಂದ ಕನ್ನಡದ ಹೊಸ ಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಯುಎಫ್‍ಒ ಮತ್ತು ಕ್ಯೂಬ್ ಡಿಜಿಟಲ್ ಸರ್ವೀಸ್ ಪ್ರೊವೈಡರ್ ಸಂಸ್ಥೆ ನಡುವೆ ಇದ್ದಂತಹ ಗೊಂದಲ ಸದ್ಯಕ್ಕೆ ಶಮನವಾಗಿದ್ದು , ಚಿತ್ರ ಪ್ರದರ್ಶನವನ್ನು ಅರಂಭಿಸಲಾಗುತ್ತಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ.
ವಾಣಿಜ್ಯ ಮಂಡಳಿಯಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಯುಎಫ್‍ಒ ಮತ್ತು ಕ್ಯೂಬ್ ಡಿಜಿಟಲ್ ಸರ್ವೀಸ್ ಪ್ರೊವೈಡರ್ ಸಂಸ್ಥೆ ಅಧಿಕಾರಿಗಳ ಜೊತೆ ನಿನ್ನೆ ಮಾತುಕತೆ ನಡೆದಿದ್ದು , ಈ ತಿಂಗಳ ಅಂತ್ಯದವರೆಗೆ ಗಡುವು ಕೇಳಿದ್ದಾರೆ ಎಂದಿದ್ದಾರೆ.
ಸಂಸ್ಥೆ ಅಧಿಕಾರಿಗಳು ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈ ವಾರ ಬಿಡುಗಡೆಯಾಗಬೇಕಾದಂತಹ ಚಲನಚಿತ್ರಗಳು ಬಿಡುಗಡೆಗೊಳ್ಳಲಿದೆ. ಸಂಸ್ಥೆಯು ಒಂದು ಚಿತ್ರ ಬಿಡುಗಡೆ ತೆಗೆದುಕೊಳ್ಳಬೇಕಾದ ಹಣವನ್ನು ಪಡೆಯುತ್ತದೆ. ಮಾತುಕತೆ ವಿಫಲವಾದರೆ ಚಿತ್ರ ನಿರ್ಮಾಪಕರಿಗೆ ಚಿತ್ರದ ಶೇ.50ರಷ್ಟು ಹಣವನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದಾರಂತೆ.
ಈ ತಿಂಗಳ ಅಂತ್ಯದವರೆಗೆ ಅವಕಾಶ ನೀಡಿದ್ದು , ಮುಂದಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳು ವಿಧಿಸಿರುವ ದುಬಾರಿ ಶುಲ್ಕದಿಂದ ವಿನಾಯ್ತಿ ಸಿಗದಿದ್ದರೆ ಚಿತ್ರ ಪ್ರದರ್ಶವನ್ನು ಸಂಪೂರ್ಣ ಬಂದ್ ಮಾಡಲಾಗುವುದು.
ಇದಕ್ಕೆ ತಮಿಳು ಚಲನಚಿತ್ರ ವಾಣಿಜ್ಯ ಮಂಡಳಿಯು ಬೆಂಬಲ ನೀಡಿದೆ ಎಂದು ಸಾ.ರಾ.ಗೋವಿಂದು ತಿಳಿಸಿದರು.