ಬೆಂಗಳೂರು: ಬಜೆಟ್ ಅಧಿವೇಶನದ ಮೊದಲ ದಿನದಂದು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಮಾಡಿದ ಬಿಜೆಪಿ ಶಾಸಕರು, ಎರಡನೇ ದಿನ ಕೂಡ ಕಲಾಪ ನಡೆಯದಂತೆ ಮಾಡಿದ್ದಾರೆ.
ನಿನ್ನೆ ಕಲಾಪಕ್ಕೆ ತೊಂದರೆಯನ್ನುಂಟು ಮಾಡಿದ್ದ ಶಾಸಕರು ಇಂದು ಕೂಡ ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಸದನದ ಬಾವಿಗಿಳಿದು ಗದ್ದಲ ಸೃಷ್ಟಿಸಿದರು.
ವಿಧಾನಸಭಾ ಕಲಾಪ ಆರಂಭವಾಗಿತ್ತಿದ್ದಂತೆ ಧರಣಿ ಆರಂಭಿಸಿದ ಬಿಜೆಪಿ ಶಾಸಕರು, ಸ್ಪೀಕರ್ ಆಗಮಿಸುತ್ತಿದ್ದಂತೆ ಘೋಷಣೆ ಕೂಗುತ್ತಾ ಸದನದ ಬಾವಿಗಿಳಿದರು. ‘ಇಲ್ಲ ಇಲ್ಲ, ಬಹುಮತ ಇಲ್ಲ’ ಎಂದು ಘೋಷಣೆ ಕೂಗುತ್ತ ಕಲಾಪಕ್ಕೆ ಅಡ್ಡಿ ಮಾಡಿದರು. ಇದರ ಮಧ್ಯೆಯೇ ಸಚಿವ ಕೃಷ್ಣಾ ಭೈರೇಗೌಡ ಕಾಗದಪತ್ರಗಳ ಮಂಡನೆ ಮಾಡಲು ಶುರುಮಾಡಿದರು. ಈ ನಡುವೆ ಮತ್ತೆ ಬಿಜೆಪಿ ಶಾಸಕರು ಕೂಗಾಟ ಹೆಚ್ಚಾದ ಹಿನ್ನಲೆ ಕಲಾಪವನ್ನು 15 ನಿಮಿಷ ಮುಂದೂಡಲಾಯಿತು. ಬಳಿಕವೂ ಬಿಜೆಪಿ ಸದಸ್ಯರಿಂದ ಧರಣಿ ಮುಂದುವರಿಕೆ ಹಿನ್ನೆಲೆ ನಾಳೆಗೆ ಕಲಾಪ ಮುಂದೂಡಲಾಗಿದೆ.
ಪರಿಷತ್ನಲ್ಲೂ ಗದ್ದಲ
ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಎದ್ದು ನಿಂತು ಕಲಾಪ ಸುಗಮಗೊಳ್ಳದಂತೆ ನೋಡಿಕೊಂಡರು.
ಸಭೆ ಆರಂಭವಾಗುತ್ತಿದ್ದಂತೆ ನಿಂತ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯಪಾಲರ ಭಾಷಣದಲ್ಲಿ ಪೂರ್ತಿ ಸುಳ್ಳು ಹೇಳಿಸಲಾಗಿದೆ. ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ. ಸರಿಯಾಗಿ ಶಾಸಕರೇ ಸದನಕ್ಕೆ ಬರುತ್ತಿಲ್ಲ ಎಂದು ಸದನದ ಬಾವಿಗೆ ಇಳಿದು ಗದ್ದಲ ಸೃಷ್ಟಿಸಿದರು.
ಏನೇ ಇದ್ದರೂ ಪ್ರಶ್ನೋತ್ತರ ನಂತರ ಮಾತಾಡಿ ಎಂದು ಆಡಳಿತ ಪಕ್ಷದ ಸದಸ್ಯರ ಆಕ್ಷೇಪವ್ಯಕ್ತಪಡಿಸಿದರು ಘೋಷಣೆ ಕೂಗುವುದನ್ನು ಮುಂದುವರೆಸಿದರು. ಇದರಿಂದಾಗಿ ವಿಧಾನಪರಿಷತ್ ಸಭಾಪತಿ ಕಲಾಪವನ್ನು 12ಗಂಟೆಗೆ ಮುಂದೂದರು. ಬಳಿಕವೂ ಮತ್ತೆ ಸದನದಲ್ಲಿ ಗದ್ದಲ ಹೆಚ್ಚಾಗಿದ್ದು 3 ಗಂಟೆಗೆ ಸದನ ಮುಂದೂಡಲಾಗಿದೆ
ಕಲಾಪಕ್ಕೆ ನಮ್ಮ ಸಹಕಾರ ಇಲ್ಲ: ಬಿಎಸ್ವೈ
ಕಲಾಪಕ್ಕೆ ಅಡ್ಡಿ ಮಾಡುತ್ತಿರುವ ಬಗ್ಗೆ ಮಾತನಾಡಿರುವ ಬಿ.ಎಸ್. ಯಡಿಯೂರಪ್ಪ, ಈ ಸರ್ಕಾರಕ್ಕೆ ಬಹುಮತ ಇಲ್ಲ, ಹಾಗಾಗಿ ಧರಣಿ ಮಾಡುತ್ತಿದ್ದೇವೆ. ಇದೇ ಕಾರಣಕ್ಕೆ ಕಲಾಪಕ್ಕೆ ಸಹಕಾರ ಕೊಡಲಿಲ್ಲ. ಬಹುಮತ ಇಲ್ಲದೇ ಹೇಗೆ ಬಜೆಟ್ ಮಂಡಿಸುತ್ತಾರೆ ಎಂದು ಪ್ರಶ್ನಿಸಿದರು.
ಬಜೆಟ್ ಓದಿದ ಬಳಿಕ ಸರ್ಕಾರ ಬಜೆಟ್ ಕಾಪಿ ಕೊಡಲು ತೀರ್ಮಾನಿಸಿದೆ. ಸಂಸತ್ತಿನಲ್ಲಿ ಈ ರೀತಿ ಸಂಪ್ರದಾಯ ಇದೆ ಅಂತಾ ಸರ್ಕಾರ ಹೇಳುತ್ತಿದೆ. ಸಿಎಂ ಬಜೆಟ್ ಓದಿದ ಬಳಿಕ ಶಾಸಕರಿಗೆ ಹಾಗೂ ಮಾಧ್ಯಮದವರಿಗೆ ಕೊಡಲು ತೀರ್ಮಾನಿಸಲಾಗಿದೆ. ಇದು ಸರಿಯಲ್ಲ. ಕರ್ನಾಟಕದಲ್ಲಿ ಈ ಸಂಪ್ರದಾಯ ಇಲ್ಲ. ಆದರೆ ನಮ್ಮ ಸಂಪ್ರದಾಯ ಹೇಗಿದೆ ಅದನ್ನೇ ಪಾಲಿಸಬೇಕು ಎಂದು ಸ್ಪೀಕರ್ ಗೆ ಪತ್ರ ಬರೆಯುತ್ತೇನೆ ಎಂದರು.
ಎಚ್ಚರಿಕೆಯಿಂದ ಇರುವಂತೆ ಬಿಜೆಪಿ ನಾಯಕರಿಗೆ ಸೂಚನೆ
ಸದನದಲ್ಲಿ ಗದ್ದಲ ಮಾಡುವ ಮೂಲಕ ಕಲಾಪಕ್ಕೆ ನಡೆಯಲು ಬಿಡಬಾರದು ಎಂದು ತೀರ್ಮಾನಿಸಿರುವ ಬಿಜೆಪಿ ಶಾಸಕರಿಗೆ ಬಿಎಸ್ ಯಡಿಯೂರಪ್ಪ ನೀತಿ ಬೋಧನೆಯನ್ನು ಮಾಡಿದ್ದಾರೆ. ಸನದಲ್ಲಿ ಅನುಚಿತವಾಗಿ ವರ್ತಿಸಿದರೆ ಅಮಾನತು ಮಾಡುವ ಸಾಧ್ಯತೆ ಇರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಸೂಚನೆ ನೀಡಿದ್ದಾರೆ
ಸದನದ ಹೋರಾಟ ಸಂಹಿತೆ ಮೀರದಂತೆ ಎಚ್ಚರ ವಹಿಸುವಂತೆ ಹಾಗೂ ಅವಾಚ್ಯ ಪದ ಬಳಸದಂತೆ ಹುಷಾರಾಗಿರುವಂತೆ, ಸದನದ ಹಕ್ಕಿಗೆ ಚ್ಯುತಿ ಬರದಂತೆ ಇರುವಂತೆ ಎಚ್ಚರಿಕೆ ನೀಡಿದ್ದಾರೆ.