ಬೆಂಗಳೂರು, ಫೆ.5- ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ನೀಡಬೇಕು ಎಂದು ಕುಪ್ಪೂರು ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಶ್ರೀ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿಯವರು ಒತ್ತಾಯಿಸಿದ್ದಾರೆ.
ಜೈ ಭಾರತ ಯುವ ಸೇನೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸ್ವಾಮೀಜಿ ಮಾತನಾಡಿ, ಡಾ.ಶ್ರೀ ಶಿವಕುಮಾರಸ್ವಾಮೀಜಿ ಸುಮಾರು 80 ವರ್ಷಗಳಿಂದ ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹ ಮಾಡಿ ದೀನದಲಿತರು, ಬಡವರ ಆಶಾಕಿರಣವಾಗಿದ್ದರು. ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಒಂದೇ ದೇವರ ಮಕ್ಕಳೆಂದು ಭಾವಿಸಿ ಮಕ್ಕಳಲ್ಲಿ ದೇವರನ್ನು ಕಂಡ ಮಹಾನ್ ಸಂತ ಎಂದು ಬಣ್ಣಿಸಿದರು.
ಪ್ರತಿವರ್ಷ ಸುಮಾರು 10 ಸಾವಿರ ಮಕ್ಕಳಿಗೆ ದಾರಿದೀಪವಾಗಿದ್ದ ನಡೆದಾಡುವ ದೇವರೆಂದೇ ಖ್ಯಾತರಾದ ಸಿದ್ದಗಂಗಾ ಶ್ರೀಗಳಿಗೆ 2007ರಲ್ಲಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿತು.2015ರಲ್ಲಿ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದೆ ಎಂದು ತಿಳಿಸಿದರು.
ನಿರಂತರ ಶುದ್ಧ ಅಂತಃಕರಣದಿಂದ ಮನುಕುಲಕ್ಕೆ ಸಿದ್ದಗಂಗಾ ಶ್ರೀಗಳು ಸೇವೆ ಸಲ್ಲಿಸಿದ್ದಾರೆ.ಮಠದ ಮೂಲಕ ಲಕ್ಷಾಂತರ ಮಕ್ಕಳ ಜೀವನಕ್ಕೆ ಇವರು ದಾರಿದೀಪವಾದರು.ಇಲ್ಲಿವರೆಗೂ ಹಿಂದೂ ಧರ್ಮ ಸಂತರಿಗೆ ಭಾರತರತ್ನ ಪ್ರಶಸ್ತಿ ನೀಡಿಲ್ಲ. ಶ್ರೀ ಶಿವಕುಮಾರಸ್ವಾಮೀಜಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರಕ್ಕೆ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜೈ ಭಾರತ ಯುವ ಸೇನೆ ರಾಜ್ಯಾಧ್ಯಕ್ಷ ಎನ್.ಪ್ರದೀಪ್, ಪದಾಧಿಕಾರಿಗಳಾದ ಕೆ.ಪಿ.ವರುಣ್, ಬಿ.ಪಿ. ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
ಜೈ ಭಾರತ ಯುವ ಸೇನೆಯ ಪದಾಧಿಕಾಗಳು ಕೂಡಾ ಸಿದ್ದಗಂಗಾ ಶ್ರೀಗಳಿಗೆ ಕೂಡಲೇ ಭಾರತರತ್ನ ಪ್ರಶಸ್ತಿ ಘೋಷಿಸಬೇಕೆಂದು ಕೇಂದ್ರ ಸರ್ಕಾರವನ್ನು ಇದೇ ವೇಳೆ ಆಗ್ರಹಿಸಿದರು.