ರೋಗನಿರೋಧಕ ಉತ್ತಮ ಇಳುವರಿಯ ತಳಿಗಳು, ಯಂತ್ರೋಪಕರಣಗಳು ಹಾಗೂ ಆಧುನಿಕ ತೋಟಗಾರಿಕಾ ತಂತ್ರಜ್ಞಾನಗಳ ಪರಿಚಯ ನೀಡುವ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದ ತನ್ನ ಆವರಣದಲ್ಲಿ ನಾಡಿದ್ದು 15ರಿಂದ 17ರವರೆಗೆ ಹಮ್ಮಿಕೊಂಡಿದೆ. ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್.ದಿನೇಶ್, ಬೆಂಗಳೂರಿನಲ್ಲಿಂದು ಸುದ್ದಿ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಮೇಳಕ್ಕೆ ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ರೈತರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಸಂಸ್ಥೆ ಅಭಿವೃದ್ಧಿ ಪಡಿಸಿರುವ ಹಣ್ಣು, ಹೂವು ಹಾಗೂ ತರಕಾರಿ ತಳಿಗಳ ತಾಕುಗಳನ್ನು ಈ ಉದ್ದೇಶಕ್ಕಾಗಿ ಅಭಿವೃದ್ದಿ ಪಡಿಸಲಾಗಿದೆ. ತೋಟಗಾರಿಕಾ ರೈತರು ನೇರವಾಗಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಅವಕಾಶ ಕಲ್ಪಿಸಲಾಗಿದೆ. ಈರುಳ್ಳಿ, ಮಾವು, ಇತ್ಯಾದಿ ಕೃಷಿಗೆ ಉಪಯುಕ್ತ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ತೋಟಗಾರಿಕಾ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತ ಯುವಕರು ಮೇಳದಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಡಾ.ಎಂ.ಆರ್.ದಿನೇಶ್ ತಿಳಿಸಿದರು.