ಬೆಂಗಳೂರು, ಫೆ.5- ರಾಜ್ಯ ಸರ್ಕಾರದ ಬಜೆಟ್ ಅಧಿವೇಶನ ಆರಂಭವಾಗಲು ಇನ್ನು ಕೇವಲ ಒಂದು ದಿನ ಬಾಕಿ.ಇಂತಹ ಸಂದರ್ಭದಲ್ಲಿ ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿರುವ ಕಾಂಗ್ರೆಸ್ ನ ನಾಲ್ವರು ಶಾಸಕರು ಇನ್ನೂ ಸಿಕ್ಕಿಲ್ಲ.
ಗೋಕಾಕ ಕ್ಷೇತ್ರದ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮತಳ್ಳಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿ ನಾಗೇಂದ್ರ ಮತ್ತು ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ಇನ್ನೂ ಪಕ್ಷದ ನಾಯಕರ ಕೈಗೆ ಸಿಗದೆ ಓಡಾಡುತ್ತಿದ್ದಾರೆ.ಅಲ್ಲದೆ ಮೈತ್ರಿ ಸರ್ಕಾರ ಸ್ಪಷ್ಟವಾಗಿ ವಿಶ್ವಾಸಮತ ನೀಡುವ ನಿರ್ಣಯವನ್ನು ಕೂಡ ತಿಳಿಸಿಲ್ಲ. ಈ ಶಾಸಕರು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದೇ ಹೇಳಲಾಗುತ್ತಿದೆ.
ಬಜೆಟ್ ನ ಜಂಟಿ ಅಧಿವೇಶನದಲ್ಲಿ ಎಲ್ಲಾ ಶಾಸಕರು ಭಾಗವಹಿಸಬೇಕೆಂದು ಇಂದು ಕಾಂಗ್ರೆಸ್ ಪಕ್ಷ ವಿಪ್ ಹೊರಡಿಸಲಿದೆ. ವಿಪ್ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ನಾಲ್ಕು ಶಾಸಕರು ಯಾವ ನಾಯಕರ ಕೈಗೆ ಸಿಗುತ್ತಿಲ್ಲ, ಸಂಪರ್ಕಕ್ಕೂ ಬರುತ್ತಿಲ್ಲ ಎಂಬ ಪರಿಸ್ಥಿತಿ ನಡುವೆ ಕಾಂಗ್ರೆಸ್ ನ ಮತ್ತೊಬ್ಬ ಶಾಸಕ ಪ್ರತಾಪ್ ಗೌಡ ಪಾಟೀಲ್ ಬಂಡಾಯ ಶಾಸಕ ಬಿ ನಾಗೇಂದ್ರ ಅವರ ಜೊತೆ ಕುಳಿತು ಮಾತನಾಡುವ ಪೋಟೋ ನಿನ್ನೆ ಬಹಿರಂಗವಾಗಿದ್ದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.ನಾಲ್ವರು ಶಾಸಕರ ಗೈರಿನಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಗಳ ಶಾಸಕರ ಸಂಖ್ಯೆ 114ಕ್ಕೆ ಇಳಿದಿದೆ.
ವಿಪ್ ಉಲ್ಲಂಘಿಸಿದರೆ ನಾಲ್ವರು ಶಾಸಕರು ಅನರ್ಹತೆಗೊಳ್ಳುವ ಸಾಧ್ಯತೆಯಿದೆ.ಕಾಂಗ್ರೆಸ್ ನಾಯಕರ ಒಂದು ಗುಂಪು ಈ ಶಾಸಕರನ್ನು ಅನರ್ಹಗೊಳಿಸಲು ಉತ್ಸುಕವಾಗಿದ್ದರೆ ಮತ್ತೊಂದು ಬಣ ಅವರನ್ನು ತಮ್ಮ ಬಳಿ ಸೆಳೆದುಕೊಳ್ಳಲು ಯೋಚಿಸುತ್ತಿದೆ.
ಮೈತ್ರಿಕೂಟ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಫೆಬ್ರವರಿ 8ರಂದು ಬಜೆಟ್ ಮಂಡಿಸಬೇಕಾದರೆ 107 ಶಾಸಕರ ಬೆಂಬಲ ಅಗತ್ಯವಿದೆ.
ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಹಿಂದೇಟು :
ನಿನ್ನೆಯವರೆಗೂ ಹದಿನೆಂಟು ಅತೃಪ್ತ ಶಾಸಕರನ್ನು ಎರಡು ತಂಡಗಳಾಗಿ ಮಾಡಿ ಸರಕಾರವನ್ನು ಅಸ್ಥಿರಗೊಳಿಸುವ ಸನ್ನಾಹದಲ್ಲಿದ್ದ ಬಿಜೆಪಿ ಈಗ ಹಿಂದೇಟು ಹಾಕುತ್ತಿದೆ. ಸರಕಾರ ಹಾಗೂ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯದ ದಾರಿ ಹಿಡಿದು ಹೆಡೆಮುರಿ ಕಟ್ಟುವ ಉತ್ಸಾಹ ಸ್ವಲ್ಪ ಹಿಂದೇಟು ಹಾಕುತ್ತಿದೆ.
ಬಿಜೆಪಿಯು ಅವಿಶ್ವಾಸ ನಿರ್ಣಯದ ಮಾರ್ಗ ಬಿಟ್ಟು ಸೈಲೆಂಟ್ ಆಪರೇಷನ್ಗೆ ವಾಲಿದೆ. ಇದು ಪ್ರಧಾನಿ ಮೋದಿಯ ವರ್ಚಸ್ಸಿಗೆ ಎಲ್ಲಿಯೂ ಹಾನಿಯಾಗದಂತೆ ಅಳೆದುತೂಗಿ ಲೆಕ್ಕಾಚಾರ ಹಾಕಿ ರಾಜ್ಯದ ಬಿಜೆಪಿ ಮುಖಂಡರು ಬೇರೆಯಾದ ಆದ ಕಾರ್ಯತಂತ್ರ ರೂಪಿಸಿದ್ದಾರೆ.
ಬಿಜೆಪಿಯ ಆಪರೇಷನ್ ಕಮಲ ಈಗಿನವರೆಗೂ ಜೀವಂತವಾಗಿರುವುದು ಹೌದು.ಆದರೆ, 18 ಶಾಸಕರು ಇನ್ನೂ ಪಕ್ಕಾ ಆಗಿಲ್ಲ. ಏನೇ ಮಾಡಿದರೂ ಬಿಜೆಪಿ ಆತ್ಮವಿಶ್ವಾಸದಿಂದ ಹೇಳಿಕೊಳ್ಳಬಹುದಾದ ಲೆಕ್ಕವೆಂದರೆ 8 ಮಾತ್ರ.ಬಹುಮತಕ್ಕೆ ಬೇಕಾಗಿರುವುದು 12 ಶಾಸಕರು.ಈ ಹಿನ್ನೆಲೆಯಲ್ಲಿ ಒಂದು ವೇಳೆ ಅವಿಶ್ವಾಸ ನಿರ್ಣಯಕ್ಕೆ ಮುಂದಾದರೆ ಸೋಲು ಖಚಿತ.ಜೊತೆಗೆ ಇನ್ನಾರು ತಿಂಗಳು ಮತ್ತೊಂದು ಅವಿಶ್ವಾಸ ನಿರ್ಣಯ ಮಂಡಿಸಲಾಗುವುದಿಲ್ಲ. ಹೀಗಾಗಿ, ಗುಪ್ತ ಕಾರ್ಯಾಚರಣೆಯ ತಂತ್ರಕ್ಕೆ ಬಿಜೆಪಿ ಮೊರೆಹೋಗಲಿದೆ.
ಹೇಗಿರುತ್ತೆ ಸೈಲೆಂಟ್ ಆಪರೇಷನ್?
ಬಿಜೆಪಿ ಮೂಲಗಳ ಪ್ರಕಾರ, ಇವತ್ತು ನಾಲ್ವರು ಕೈ ರೆಬೆಲ್ ಶಾಸಕರು ರಾಜೀನಾಮೆ ಕೊಡಲಿದ್ದಾರೆ.ಇವತ್ತು ಕೊಡದಿದ್ದರೆ ಫೆ.8ಕ್ಕಾದರೂ ಇವರು ರಿಸೈನ್ ಮಾಡುವುದು ನಿಶ್ಚಿತವೆನ್ನಲಾಗಿದೆ.ಮುಂಬೈನಲ್ಲಿರುವ ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮಹೇಶ್ ಕುಮಟಳ್ಳಿ ಮತ್ತು ಉಮೇಶ್ ಜಾಧವ್ ಅವರು ಬೆಂಗಳೂರಿಗೆ ಇವತ್ತು ಆಗಮಿಸುತ್ತಿದ್ದು, ರಾಜೀನಾಮೆಗೆ ಸಿದ್ಧವಾಗಿಯೇ ಇದ್ದಾರೆ.
ಇದಾದ ನಂತರ ಒಳಗೊಳಗೆಯೇ ಆಪರೇಷನ್ ಮುಂದುವರಿಸಿ ಹಂತಹಂತವಾಗಿ ಶಾಸಕರ ರಾಜೀನಾಮೆ ಕೊಡಿಸುವುದು.ಬಿಜೆಪಿಗೆ ಬಹುಮತ ಬರುವಷ್ಟು ಶಾಸಕರು ಲಭ್ಯವಾದರೆ, ಅಂದರೆ 14 ಶಾಸಕರು ರಾಜೀನಾಮೆ ನೀಡಿದರೆ, ಅಂತಿಮವಾಗಿ ಅವಿಶ್ವಾಸ ನಿರ್ಣಯ ಮಂಡಿಸುವುದು ಬಿಜೆಪಿಯ ತಂತ್ರವಾಗಿದೆ.
ಆದರೆ, ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಮೈತ್ರಿಪಕ್ಷಗಳೂ ಕೂಡ ರಿವರ್ಸ್ ಆಪರೇಷನ್ ಮಾಡಲು ಅಣಿಯಾಗಿವೆ. ಒಂದು ವೇಳೆ ಬಿಜೆಪಿಯ ಅಸಮಾಧಾನಿತ ಶಾಸಕರು ಮೈತ್ರಿ ಸರಕಾರದ ಆಮಿಷಕ್ಕೆ ಸಿಲುಕಿದರೆ ಬಿಜೆಪಿಯ ಇಷ್ಟೆಲ್ಲಾ ಆಟಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತವೆ.