ಹಿಂದೂ ಮಹಾಸಾಗರದಲ್ಲಿ ಕಡಿಮೆ ವಾಯುಭಾರ ಒತ್ತಡ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಭಾಗದ ಕರಾವಳಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ತಿರುವನಂತಪುರಂನಲ್ಲಿ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಬಾರದು ಎಂದು ಸೂಚಿಸಲಾಗಿದ್ದು, ನೌಕಾಪಡೆ ಮತ್ತು ಕರಾವಳಿ ಭದ್ರತಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಕರಾವಳಿಯಲ್ಲಿ ಕಡಿಮೆ ವಾಯುಭಾರ ಒತ್ತಡ ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಸೂಚನೆ ಮೇರೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಕಳೆದ ನವಂಬರ್‍ನಲ್ಲಿ ಓಖಿ ಚಂಡಮಾರುತ ಕೇರಳ, ತಮಿಳುನಾಡು ಹಾಗೂ ಲಕ್ಷದ್ವೀಪಕ್ಕೆ ಅಪ್ಪಳಿಸಿತ್ತು. ಇದರ ಪರಿಣಾಮ ಹಲವಾರು ಮೀನುಗಾರರು ಜೀವ ಕಳೆದುಕೊಂಡಿದ್ದು, ಕೆಲವು ಮಂದಿ ಕಾಣೆಯಾಗಿದ್ದರು.