ಆಸ್ಪತ್ರೆಯಿಂದ ಆನಂದ್ ಸಿಂಗ್ ದಿಢೀರ್ ಡಿಸ್ಚಾರ್ಜ್: ಇದರ ಹಿಂದಿದೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್

ಬೆಂಗಳೂರು: ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಕಂಪ್ಲಿ ಗಣೇಶ್ ಅವರಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಳ್ಳಾರಿಯ ವಿಜಯನಗರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಡಿಸ್ಚಾರ್ಜ್ ಆಗಿದ್ದಾರೆ.

ಅಪೋಲೋ ಆಸ್ಪತ್ರೆಯ ವೈದ್ಯರು ಒಂದು ವಾರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು. ಆನಂದ್ ಸಿಂಗ್ ಸಹ ಇನ್ನೂ ಒಂದು ವಾರ ಚಿಕಿತ್ಸೆ ನಡೆಯಲಿದೆ ಎಂದು ತಿಳಿಸಿದ್ದರು. ಆದರೆ ಆನಂದ್ ಸಿಂಗ್ ಆಸ್ಪತ್ರೆಯಿಂದ ದಿಢೀರ್ ಆಗಿ ಡಿಸ್ಚಾರ್ಜ್ ಆಗಿದ್ದಾರೆ.

ಆನಂದ್ ಸಿಂಗ್ ಡಿಸ್ಚಾರ್ಜ್ ಹಿಂದೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಇದೆ. ತಲೆ ಮರೆಸಿಕೊಂಡಿರುವ ಕಂಪ್ಲಿ ಗಣೇಶ್‍ಗೆ ಸ್ಟ್ರೋಕ್ ಕೊಡಲು ಕಾಂಗ್ರೆಸ್ ತಂತ್ರದ ಭಾಗವಾಗಿ ಆನಂದ್ ಸಿಂಗ್ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ. ಆನಂದ್ ಸಿಂಗ್ ಡಿಸ್ಚಾರ್ಜ್ ಆದರೆ ಕಂಪ್ಲಿ ಗಣೇಶ್ ಬರುತ್ತಾರೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.

ಡಿಸ್ಚಾರ್ಜ್ ಆದರೆ ಜಾಮೀನು ಸಿಗುತ್ತದೆ. ಹೀಗಾಗಿ ತಲೆಮರೆಸಿಕೊಂಡಿರುವ ಗಣೇಶ್ ನಿರೀಕ್ಷಣಾ ಜಾಮೀನು ಸಲ್ಲಿಸಬಹುದು ಎನ್ನುವ ಲೆಕ್ಕಾಚಾರವನ್ನು ಕಾಂಗ್ರೆಸ್ ಹಾಕಿಕೊಂಡಿದೆ.

ಕಾಂಗ್ರೆಸ್‍ನ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಲು ಗಣೇಶ್ ಪ್ರತಿತಂತ್ರ ರೂಪಿಸಿದ್ದು, ಗಣೇಶ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸದೇ ಇರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸದೇ ಬೆಂಗಳೂರಿಗೆ ಎಂಟ್ರಿ ಕೊಡಲು ನಿರ್ಧರಿಸಿದ್ದಾರೆ.

ಜಾಮೀನು ಅರ್ಜಿ ಸಲ್ಲಿಸದ ಕಾರಣ ಬೆಂಗಳೂರಿಗೆ ಬರುತ್ತಿದ್ದಂತೆ ಗಣೇಶ್ ಅವರನ್ನು ಪೊಲೀಸರು ಬಂಧಿಸಲೇಬೇಕಾಗುತ್ತದೆ. ಬಂಧಿಸದೇ ಇದ್ದರೆ ಸರ್ಕಾರಕ್ಕೆ ಮತ್ತು ಪೋಲೀಸರಿಗೆ ತೀವ್ರ ಮುಖಭಂಗವಾಗಲಿದೆ. ಬಂಧಿಸಿದ್ದರೂ 2, 3 ದಿನಗಳಲ್ಲಿ ಜಾಮೀನು ಸಿಗುತ್ತದೆ. ಹೀಗಾಗಿ ಸರ್ಕಾರ ಬೀಳಿಸುವ ಆಟ ಮುಗಿಯುವ ತನಕ ಜೈಲಿನಲ್ಲಿಯೇ ಇರಲು ಗಣೇಶ್ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಜನವರಿ 19ರ ರಾತ್ರಿ ಈಗಲ್ ಟನ್ ರೆಸಾರ್ಟಿನಲ್ಲಿ ಕಂಪ್ಲಿ ಗಣೇಶ್ ಕುಡಿದು ಗಲಾಟೆ ನಡೆಸಿ ಶಾಸಕ ಆನಂದ್ ಸಿಂಗ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದರು. ಹಲ್ಲೆ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸ್ ವಿಶೇಷ ತಂಡಗಳ ಹುಡುಕಾಟ ನಡೆಸುತ್ತಿವೆ. ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೈದ ಶಾಸಕ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಗಣೇಶ್ ಅವರನ್ನು ಅಮಾನತು ಮಾಡಲಾಗಿದೆ. ಕೆಪಿಸಿಸಿ ಸಭೆ ನಡೆಸಿ ಕಾಂಗ್ರೆಸ್ ಪಕ್ಷದಿಂದ ಶಾಸಕ ಗಣೇಶ್ ಅವರನ್ನು ಅಮಾನತು ಮಾಡುವ ನಿರ್ಧಾರವನ್ನು ಕೈಗೊಂಡಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ