ನಗರದಲ್ಲಿ ರಾಷ್ಟ್ರ ಮಟ್ಟದ ದ್ರವ್ಯ ಗುಣ ಪ್ರಬೋದಿನಿ ವಿಚಾರ ಸಂಕಿರಣ

ಬೆಂಗಳೂರು, ಫೆ.4- ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯವು ಫೆ.7 ಮತ್ತು 8 ರಂದು ರಾಷ್ಟ್ರ ಮಟ್ಟದ ದ್ರವ್ಯ ಗುಣ ಪ್ರಬೋಧಿನಿ ಎಂಬ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಆಯುಷ್ ಇಲಾಖೆಯ ಅಧ್ಯಕ್ಷರಾದ ಮೀನಾಕ್ಷಿ ನೇಗಿ ತಿಳಿಸಿದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಿಂದ 300ಕ್ಕೂ ಹೆಚ್ಚು ದ್ರವ್ಯ ಗುಣ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಲಿದ್ದಾರೆ.ಆಯುರ್ವೇದ ಶಾಸ್ತ್ರದಲ್ಲಿ ಔಷಧಿ ದ್ರವ್ಯಗಳ ಪರಿಚಯ ಮತ್ತು ಅವುಗಳನ್ನು ಪ್ರಾಯೋಗಿಕವಾಗಿ ಬಳಸುವ ಬಗ್ಗೆ ತಿಳಿಸುವ ವಿಜ್ಞಾನವನ್ನು ದ್ರವ್ಯ ಗುಣ ಎಂದು ಕರೆಯುತ್ತಾರೆ ಎಂದರು.

ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ.ಅಹಲ್ಯ ಮಾತನಾಡಿ, ದ್ರವ್ಯ ಗುಣ ಪ್ರಬೋಧಿನಿ ವಿಚಾರ ಸಂಕಿರಣವು ಸ್ನಾತಕೋತ್ತರ ವಿದ್ಯಾರ್ಥಿಗ ಪಠ್ಯಕ್ರಮಕ್ಕೆ ಪೂರಕವಾಗಿದ್ದು , ವಿಚಾರ ಸಂಕಿರಣದಲ್ಲಿ ವೈಜ್ಞಾನಿಕ ಉಪನ್ಯಾಸಗಳು , ಅಪರೂಪದ ಔಷಧಿ ದ್ರವ್ಯಗಳ ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಫೆ.5 ಮತ್ತು 6 ರಂದು ದ್ರವ್ಯಕಾನ್ ಎಂಬ ವಿಶೇಷವಾದ ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ಜಯನಗರದ ಡ್ರಗ್ ಟೆಸ್ಟಿಂಗ್ ಲ್ಯಾಬೊರೇಟರಿಯಲ್ಲಿ ನಡೆಸಲಾಗುತ್ತದೆ.

ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ಜಂಟಿ ನಿರ್ದೇಶಕ ರೋಷನ್ ಜಗ್ಗಿ , ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ, ಭಾರತೀಯ ಚಿಕಿತ್ಸಾ ಕೇಂದ್ರೀಯ ಪರಿಷತ್‍ನ ಡಾ.ರಾಮಕೃಷ್ಣ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕರಾದ ಡಾ.ಲಲಿತಾ, ಡಾ.ವೀಣಾ, ಡಾ.ಮಮತಾ ಸೇರಿದಂತೆ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ