ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಬೆಂಗಳೂರು, ಫೆ.4- ಕಾಂಗ್ರೆಸ್‍ನ ಯಾವ ಶಾಸಕರೂ ಪಕ್ಷ ಬಿಡುವುದಿಲ್ಲ. ಎಲ್ಲರೂ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸುತ್ತಾರೆ.ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರ ಆಡಳಿತ ನೀಡಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ನಾನಾ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದ್ದಾರೆ. ಸಿಬಿಐ, ಆದಾಯ ತೆರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳನ್ನು ದರುಪಯೋಗ ಪಡಿಸಿಕೊಂಡು ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅದ್ಯಾವುದಕ್ಕೂ ಮಣಿಯದೆ ಕಾಂಗ್ರೆಸ್ ಶಾಸಕರು ಪಕ್ಷದ ಪರ ದೃಢವಾಗಿ ನಿಂತಿದ್ದಾರೆ. ಅತೃಪ್ತ ಶಾಸಕರ ಪೈಕಿ ಉಮೇಶ್ ಜಾಧವರ ಜತೆ ನಾನು ಮಾತುಕತೆ ನಡೆಸಿದ್ದೇನೆ. ಎಲ್ಲಾ ಶಾಸಕರು ನನ್ನ ಸಂಪರ್ಕದಲ್ಲಿ ಇಲ್ಲದೇ ಇರಬಹುದು. ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು.

ಪಕ್ಷ ಸಂಘಟನೆ ದೃಷ್ಟಿಯಿಂದ ಕಾಂಗ್ರೆಸ್‍ಗೆ ಇನ್ನೂ ಮೂರು ಕಾರ್ಯಾಧ್ಯಕ್ಷರನ್ನು ನೇಮಿಸಲಾಗುತ್ತದೆ ಎಂಬ ಮಾಹಿತಿ ನನಗಿಲ್ಲ. ದಿನೇಶ್‍ಗುಂಡೂರಾವ್ ಅಧ್ಯಕ್ಷರಾದ ಮೇಲೆ ಹಾಗೂ ನಾನು ಕಾರ್ಯಾಧ್ಯಕ್ಷನಾದ ಮೇಲೆ ಕಳೆದ 8 ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇವೆ. ಪಕ್ಷದ ಕಾರ್ಯ ಉತ್ತಮವಾಗಿ ನಡೆಯುತ್ತಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ