ಕೋಲ್ಕತಾದ ಎಲ್ಲಾ ಸಿಬಿಐ ಕಚೇರಿ ಹಾಗೂ ಅಧಿಕಾರಿಗಳ ಮನೆಗಳಿಗೆ ಅರೆಸೇನಾ ಪಡೆ ನಿಯೋಜನೆ ಮಾಡಿದ್ದಾದರು ಏಕೆ ಗೊತ್ತೇ?

ಕೋಲ್ಕತಾ: ಕೋಲ್ಕತಾದ ಸಿಬಿಐ ಉನ್ನತ ಅಧಿಕಾರಿಯೊಬ್ಬರು ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡ ಬೆನ್ನಲ್ಲೇ ಕೇಂದ್ರ ಸರಕಾರವು ಸಿಬಿಐ ಅಧಿಕಾರಿಗಳಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದೆ. ಕೋಲ್ಕತಾದ ಎಲ್ಲಾ ಸಿಬಿಐ ಕಚೇರಿಗಳು ಹಾಗೂ ಸಿಬಿಐ ಅಧಿಕಾರಿಗಳ ಮನೆಗಳಿಗೆ ಭದ್ರತೆ ಒದಗಿಸಲು ಭಾರೀ ಸಂಖ್ಯೆಯಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. ದಕ್ಷಿಣ ಕೋಲ್ಕತಾ ಮತ್ತು ಸಾಲ್ಟ್ ಲೇಕ್ ಬಳಿ ಇರುವ ಸಿಬಿಐ ಕಚೇರಿಗಳಂತೂ ಸಿಆರ್​ಪಿಎಫ್ ಯೋಧರು ಬಿಗಿಭದ್ರತೆ ಒದಗಿಸುತ್ತಿದ್ದಾರೆ. ಇಲ್ಲಿಗೆ ಬರುವವರನ್ನು ಬಹುವಿಧವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಕಚೇರಿಗಳಷ್ಟೇ ಅಲ್ಲ, ಸಿಬಿಐ ಅಧಿಕಾರಿಗಳ ಮನೆಗಳಲ್ಲೂ ಕೇಂದ್ರ ಸರಕಾರ ಬಿಗಿಭದ್ರತೆ ನಿಯೋಜಿಸಿದೆ.

ಕೋಲ್ಕತಾದ ಸಿಬಿಐ ಜಂಟಿ ನಿರ್ದೇಶಕ ಪಂಕಜ್ ಶ್ರೀವಾಸ್ತವ್ ಅವರು ತಮಗೆ ಜೀವ ಬೆದರಿಕೆ ಇದೆ ಎಂದು ನಿನ್ನೆ ಆತಂಕ ತೋಡಿಕೊಂಡಿದ್ದರು. ಕೋಲ್ಕತಾದ ಪೊಲೀಸ್ ಅಧಿಕಾರಿಗಳು ತಮ್ಮ ಮನೆಯನ್ನು ಸುತ್ತುವರಿದು ಬಾಗಿಲು ಬಡಿದರೆಂದು ಪಂಕಜ್ ಹೇಳಿಕೊಂಡಿದ್ದಾರೆ.

“ನನ್ನ ಕುಟುಂಬ ಭಯಭೀತಗೊಂಡಿದೆ. ನನ್ನ ಭದ್ರತೆ ಬಗ್ಗೆ ಭಯವಾಗುತ್ತಿದೆ. ಪೊಲೀಸರು ಯಾವ ಕ್ಷಣವಾದರೂ ಬಾಗಿಲು ಮುರಿದು ನನ್ನನ್ನು ಬಂಧಿಸಬಹುದು,” ಎಂದು ಶ್ರೀವಾಸ್ತವ್ ಹೇಳಿದ್ದಾರೆ.

ಇದೇ ವೇಳೆ, ನಿನ್ನೆ ಪೊಲೀಸ್ ಆಯುಕ್ತರ ಮೇಲೆ ರೇಡ್ ಮಾಡಲು ಬಂದ 40 ಸಿಬಿಐ ಅಧಿಕಾರಿಗಳನ್ನೇ ಬಂಧಿಸಿದ ಕೋಲ್ಕತಾ ಪೊಲೀಸರು ಕೂಡ ಆಯುಕ್ತರ ಕಚೇರಿಯಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ರಾಜೀವ್ ಕುಮಾರ್ ಅವರ ನಿವಾಸ ಹಾಗೂ ಸುತ್ತಲಿನ ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಒಟ್ಟಾರೆಯಾಗಿ ಕೋಲ್ಕತಾದಲ್ಲಿ ನಿನ್ನೆಯಿಂದಲೂ ಸಮರದ ರೀತಿಯ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಸಿಬಿಐ ರೇಡ್ ಹಾಗೂ ಕೇಂದ್ರದ ಕ್ರಮ ವಿರುದ್ಧ ಅಹೋರಾತ್ರಿ ಧರಣಿ ನಡೆಸಿದ್ದ ಮಮತಾ ಬ್ಯಾನರ್ಜಿ ಅವರು ಇಂದೂ ಕೂಡ ತಮ್ಮ ಸತ್ಯಾಗ್ರಹ ಮುಂದುವರಿಸಿದ್ಧಾರೆ. ಮಮತಾ ಅವರಿಗೆ ಬಹುತೇಕ ವಿಪಕ್ಷ ಮುಖಂಡರು ಬೆಂಬಲವಾಗಿ ನಿಂತಿದ್ದಾರೆ.

ಮಮತಾ ಬ್ಯಾನರ್ಜಿ ವಿರುದ್ಧ ಆರೋಪ ಕೇಳಿಬಂದಿರುವ ಶಾರದಾ ಚಿಟ್​ಫಂಡ್ ಹಗರಣದಲ್ಲಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಂದ ಸಾಕ್ಷ್ಯಾಧಾರ ನಾಶವಾಗಿದೆ ಎಂಬುದು ಸಿಬಿಐ ಆರೋಪವಾಗಿದೆ. ಹೀಗಾಗಿ, ಅವರ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ನಿನ್ನೆ ದಾಳಿ ನಡೆಸಲು ಪ್ರಯತ್ನಿಸಿದರೆನ್ನಲಾಗಿದೆ. ಪ್ರಕರಣದಲ್ಲಿ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲವೆಂದು ಆರೋಪಿಸಿ ಸಿಬಿಐ ಇಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ