ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಹೈಡ್ರಾಮಾ ಮುಂದುವರೆದಿದೆ. ಬಹುಕೋಟಿ ರೋಸ್ ವ್ಯಾಲಿ ಮತ್ತು ಶಾರದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸಿದ್ದ ವಿಶೇಷ ತಂಡದ ನೇತೃತ್ವ ವಹಿಸಿದ್ದ ಹಾಲಿ ಕೋಲ್ಕತಾ ಪೊಲೀಸ್ ಆಯುಕ್ತ, ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ರನ್ನು ವಿಚಾರಣೆ ನಡೆಸಲು ತೆರಳಿದ್ದ ಸಿಬಿಐ ಅಧಿಕಾರಿಗಳನ್ನೇ ಕೋಲ್ಕತಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಲ್ಕತಾದ ಲುಡಾನ್ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ನಿವಾಸಕ್ಕೆ 40ಕ್ಕೂ ಹೆಚ್ಚು ಮಂದಿ ಸಿಬಿಐ ಅಧಿಕಾರಿಗಳು ರವಿವಾರ ಸಂಜೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಭದ್ರತಾ ಸಿಬಂದಿ ಕೇಂದ್ರ ತಂಡಕ್ಕೆ ಒಳಗೆ ಪ್ರವೇಶಿಸುವುದಕ್ಕೆ ಅವಕಾಶ ಕೊಡಲಿಲ್ಲ. ಸುದ್ದಿ ತಿಳಿಯುತ್ತಲೇ ಪಶ್ಚಿಮ ಬಂಗಾಲ ಪೊಲೀಸ್ ಮಹಾನಿರ್ದೇಶಕ ಸಹಿತ ಹಿರಿಯ ಅಧಿಕಾರಿಗಳು ಪೊಲೀಸ್ ಆಯುಕ್ತರ ನಿವಾಸಕ್ಕೆ ಧಾವಿಸಿದರು. ಒಂದು ಹಂತದಲ್ಲಿ ಸಿಬಿಐ ಅಧಿಕಾರಿಗಳು ಮತ್ತು ಕೋಲ್ಕತಾ ಪೊಲೀಸರ ನಡುವೆ ಬಿರುಸಿನ ಮಾತಿನ ಚಕಮಕಿ ಮತ್ತು ತಳ್ಳಾಟವೂ ನಡೆಯಿತು. ಅಂತಿಮವಾಗಿ 40 ಮಂದಿ ಸಿಬಿಐ ಅಧಿಕಾರಿಗಳ ಪೈಕಿ 15 ಮಂದಿಯನ್ನು ಬಲವಂತವಾಗಿ ಜೀಪ್ನಲ್ಲಿ ಕುಳ್ಳಿರಿಸಿಕೊಂಡು ಪೊಲೀಸರು ಠಾಣೆಗೆ ಕರೆದೊಯ್ದರು.
ಸುದ್ದಿ ತಿಳಿದು ರೋಷಗೊಂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀವ್ ಕುಮಾರ್ ನಿವಾಸಕ್ಕೆ ಧಾವಿಸಿದರು. ಅಲ್ಲಿ ಸುದ್ದಿಗೋಷ್ಠಿ ನಡೆಸಿ, ಪ್ರಧಾನಿ ಮೋದಿ ಮತ್ತು ಶಾ ಪಶ್ಚಿಮ ಬಂಗಾಲದಲ್ಲಿ ದಂಗೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಟೀಕಿಸಿದರು. ಜತೆಗೆ ಪ್ರಜಾಪ್ರಭುತ್ವದ ಉಳಿವಿಗಾಗಿ ಧರಣಿ ನಡೆಸುವುದಾಗಿ ಘೋಷಿಸಿದರು. ಬಳಿಕ ಐತಿಹಾಸಿಕ ಮೆಟ್ರೋ ಸಿನೆಮಾ ಬಳಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಿಪಕ್ಷಗಳು ತಿರುಗಿಬಿದ್ದಿವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ದೇವೇಗೌಡ ಸಹಿತ ಪ್ರಮುಖರು ಮಮತಾಗೆ ಬೆಂಬಲ ಸೂಚಿಸಿದ್ದಾರೆ. ಜತೆಗೆ ಸಂಸತ್ನಲ್ಲಿ ಸೋಮವಾರ ವಿಚಾರ ಪ್ರಸ್ತಾವಿಸಲು ತೀರ್ಮಾನಿಸಿವೆ.
cbi-officers-held-outside-kolkata-police