ಗೋದಾಮೊಂದರ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ 11 ಟನ್ ಪ್ಲಾಸ್ಟಿಕ್ ವಸ್ತುಗಳ ವಶ

ಮೈಸೂರು, ಮಾ.13- ಗೋದಾಮೊಂದರ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ 11 ಟನ್ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಂತೆಪೇಟೆಯ ಗೋದಾಮೊಂದರ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಅಲ್ಲಿ 11 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ಕವರ್, ಕ್ಯಾರಿಬ್ಯಾಗ್, ಲೋಟ ಸೇರಿದಂತೆ ಪ್ಲಾಸ್ಟಿಕ್‍ನ ವಿವಿಧ ವಸ್ತುಗಳನ್ನು ದಾಸ್ತಾನು ಮಾಡಲಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

50 ಮೈಕ್ರಾನ್‍ಗಿಂತಲೂ ತೆಳುವಾದ ಪ್ಲಾಸ್ಟಿಕ್ ಕವರ್, ಕ್ಯಾರಿಬ್ಯಾಗ್‍ಗಳ ತಯಾರಿಕೆ ಮತ್ತು ಮಾರಾಟ ನಿಷೇಧಿಸಲಾಗಿದೆ. ಹೀಗಿದ್ದರೂ ಕೂಡ ಇಲ್ಲಿನ ಸಂತೆಪೇಟೆಯ 3ನೆ ಕ್ರಾಸ್‍ನ ದಿವ್ಯಶ್ರೀ ಕಾಂಪ್ಲೆಕ್ಸ್ ಬಳಿ ಇರುವ ರಾಧಾರಾಮ್ ಎಂಬುವವರು ಗೋದಾಮಿನಲ್ಲಿ ಕಡಿಮೆ ಮೆಟ್ರಿಕ್ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಗೋದಾಮಿನ ಮೇಲೆ ದಾಳಿ ನಡೆಸಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವೇಳೆ ಮಾಜಿ ಮೇಯರ್ ದಾಳಿ ನಡೆಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ವಶಪಡಿಸಿಕೊಂಡಿರುವ ವಸ್ತುಗಳನ್ನು ವಾಪಸ್ ನೀಡುವಂತೆ ಒತ್ತಡ ಹೇರಲಾಗಿದೆ.
ಇದಲ್ಲದೆ, ಶಾಸಕರ ಕಡೆಯವರೆಂದು ಹೇಳಿಕೊಂಡು ಕೆಲ ವ್ಯಕ್ತಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿ ವಶಪಡಿಸಿಕೊಂಡಿರುವ ವಸ್ತುವಿನಲ್ಲಿ ಅರ್ಧದಷ್ಟು
ವಸ್ತುಗಳನ್ನು ಹಿಂದಿರುಗಿಸುವಂತೆ ಒತ್ತಡ ಹೇರಿದ್ದಾರೆ. ಇದಾವುದಕ್ಕೂ ಮಣಿಯದ ಅಧಿಕಾರಿಗಳು ಗೋದಾಮಿನ ಮೇಲೆ ದಾಳಿ ನಡೆಸಿ 11 ಟನ್‍ನಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇದು ಪಾಲಿಕೆಯ ಇತಿಹಾಸದಲ್ಲೇ ಪ್ರಥಮ ಬಾರಿ ಎನ್ನಲಾಗಿದೆ. ಪಾಲಿಕೆಯ ಪರಿಸರ ಎಂಜಿನಿಯರ್ ಮೈತ್ರಿ, ಮಧುಕರ್, ಪರಿಸರ ನಿಯಂತ್ರಣ ಮಂಡಳಿಯ ಮಂಜುನಾಥ್, ಶೃತಿ ಸೇರಿದಂತೆ ಮತ್ತಿತರರು ಕಾರ್ಯಾಚರಣೆ ನಡೆಸಿದರು. ಸುದ್ದಿ ತಿಳಿದ ಕೂಡಲೇ ಪಾಲಿಕೆ ಆಯುಕ್ತ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ವಸ್ತುಗಳನ್ನು ಪರಿಶೀಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ