ವಾಷಿಂಗ್ಟನ್, ಜ.31-ಅಮೆರಿಕದಲ್ಲಿ ಭಾರತೀಯ ಮೂಲದವರನ್ನು ಗುರಿಯಾಗಿಟ್ಟುಕೊಂಡು ದಾಳಿ ಮುಂದುವರಿಸಿರುವ ದುಷ್ಕರ್ಮಿಗಳು ಕೆಂಟಕಿ ರಾಜ್ಯದಲ್ಲಿ ಹಿಂದೂ ದೇವಾಲಯವೊಂದನ್ನು ಭಗ್ನಗೊಳಿಸಿ ಅಟ್ಟಹಾಸ ಪ್ರದರ್ಶಿಸಿದ್ದಾರೆ. ಇದು ಜನಾಂಗೀಯ ದ್ವೇಷದ ಮತ್ತೊಂದು ಪ್ರಕರಣವಾಗಿದೆ.
ಕೆಂಟಕಿ ಪ್ರಾಂತ್ಯದ ಲೂಯಿಸ್ವಿಲ್ಲೆ ನಗರದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿ ಈ ಘಟನೆ ನಡೆದಿದೆ. ದೇವರಿಗೆ ಕಪ್ಪು ಬಣ್ಣ ಬಳಿದು ಭಗ್ನಗೊಳಿಸಿರುವ ದುಷ್ಕರ್ಮಿಗಳು ಮಂದಿರದ ಮುಖ್ಯ ಪ್ರಾಂಗಣದಲ್ಲಿ ಕುರ್ಚಿಯೊಂದಕ್ಕೆ ಚಾಕುವೊಂದನ್ನು ಚುಚ್ಚಿ ಪರಾರಿಯಾಗಿದ್ದಾರೆ.
ದೇವರ ವಿಗ್ರಹಕ್ಕೆ ಕಪ್ಪು ಬಣ್ಣ ಸಿಂಪಡಿಸಲಾಗಿದೆ, ಕಿಟಕಿಗಳನ್ನು ಒಡೆದು ಹಾಕಲಾಗಿದೆ. ದೇವಾಲಯದ ಗೋಡೆಗಳ ಮೇಲೆ ಅವಹೇಳನಕಾರಿ ಸಂದೇಶ ಮತ್ತು ಗೀಚುಬರಹಗಳನ್ನು ಬರೆಯಲಾಗಿದೆ. ಕುರ್ಚಿಗೆ ಚಾಕುವನ್ನು ಚುಚ್ಚಲಾಗಿದೆ. ಮಂದಿರದ ಕಪಾಟಿನಲ್ಲಿದ್ದ ವಸ್ತುಗಳನ್ನು ದೋಚಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆ ನಂತರ ಕೆಂಟಕಿ ಮತ್ತು ಲೂಯಿಸ್ವಿಲ್ಲೆಯಲ್ಲಿ ಭಾರತೀಯ ಮೂಲದ ಅಮೆರಿಕನ್ ಸಮುದಾಯದಲ್ಲಿ ಆತಂಕ ಉಂಟಾಗಿದೆ.
ಈ ಜನಾಂಗೀಯ ದ್ವೇಷದ ಘಟನೆ ಬಗ್ಗೆ ತನಿಖೆಗೆ ಆದೇಶಿಸಿರುವ ಲೂಯಿಸ್ವಿಲ್ಲೆ ಮೇಯರ್ ಗ್ರೆಗ್ ಫಿಷರ್, ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿದ್ದಾರೆ.