ನವದೆಹಲಿ: ವಿವಾದಿತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂಮಿಯ ಸುತ್ತ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ ಹೆಚ್ಚುವರಿ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ರಾಮ ಜನ್ಮಭೂಮಿ-ಬಾಬ್ರಿ ಮಸೀದಿಯ 2.77 ಎಕರೆ ವಿವಾದಿತ ಭೂಮಿಯ ಸುತ್ತ ದೇಗುಲ ನಿರ್ಮಾಣಕ್ಕಾಗಿ ಒಟ್ಟು 67ಕ್ಕೂ ಹೆಚ್ಚು ಎಕರೆ ಭೂಮಿಯನ್ನು 1991ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈಗ ಈ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲು ರಾಮ ಜನ್ಮಭೂಮಿ ನ್ಯಾಸ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡ ಭೂಮಿಯನ್ನು ಹಿಂದಿರುಗಿಸಲು ಸಮ್ಮತಿಸಿದೆ ಎಂದು ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಅಯೋಧ್ಯೆಯಲ್ಲಿ ದೇಗುಲ ನಿರ್ಮಾಣಕ್ಕಾಗಿ ಶಿಲಾ ಪೂಜೆಯನ್ನು ಏರ್ಪಡಿಸಲು ಅನುಮತಿ ನಿರಾಕರಿಸಿದ್ದ ಸುಪ್ರೀಂಕೋರ್ಟ್, 2003ರಲ್ಲಿ ವಿವಾದಿತ ಭೂಮಿ ಮತ್ತು 67ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಆದರೆ, ರಾಮ ಜನ್ಮಭೂಮಿ ನ್ಯಾಸ್ ಬಳಿಯಿರುವ 67ಕ್ಕೂ ಹೆಚ್ಚು ಎಕರೆ ಭೂಮಿ ವಿವಾದರಹಿತವಾಗಿರುವ ಕಾರಣ, ಅದನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲು ಯಾವುದೇ ಅಡ್ಡಿಯಿಲ್ಲ ಎಂದು ಕೇಂದ್ರ ಅರ್ಜಿಯಲ್ಲಿ ವಿವರಿಸಿದೆ.