ಮೈಸೂರು, ಜ.28- ವರುಣಾ ಕ್ಷೇತ್ರದ ಶಾಸಕರು ನಮ್ಮ ಕೈಗೆ ಸಿಗುತ್ತಿಲ್ಲ. ಕೆಲಸ, ಕಾರ್ಯಗಳು ನಡೆಯುತ್ತಿಲ್ಲ ಎಂದು ತಾಲ್ಲೂಕು ಪಂಚಾಯ್ತಿಯ ಮಾಜಿ ಉಪಾಧ್ಯಕ್ಷೆಯೊಬ್ಬರು ದೂರಿನ ಸುರಿಮಳೆ ಸುರಿಸಿ ಆಕ್ರೋಶ ಭರಿತ ಮಾತುಗಳನ್ನಾಡಿದಕ್ಕೆ ಕೆಂಡಾಮಂಡಲರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ವೇಗಿತರಾದ ಘಟನೆ ಇಲ್ಲಿ ನಡೆದಿದೆ.
ಕಾಮಗಾರಿಯೊಂದರ ಉದ್ಘಾಟನೆಗೆ ಇಲ್ಲಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಅವರ ಬಗ್ಗೆ ಜಮಲಾಲ್ ಎಂಬ ಮಹಿಳೆ ಸಿದ್ದರಾಮಯ್ಯ ಹಾಗೂ ಇತರ ನಾಯಕರು ಕುಳಿತಿರುವ ಸ್ಥಳದಲ್ಲೇ ಹಲವಾರು ಆರೋಪಗಳನ್ನು ಮಾಡಿ ಮೇಜು ತಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದಾಗಿ ಸಿದ್ದರಾಮಯ್ಯ ಕೋಪಗೊಂಡು ಅವರ ಮೈಕನ್ನು ಕಿತ್ತುಕೊಂಡು ನೀವೇನು ಹೇಳುತ್ತಿದ್ದೀರಾ? ಮಾತನಾಡುವ ರೀತಿ ಸರಿಯೇ. ಹೀಗೆಲ್ಲಾ ಆಡುವುದು ಸರಿಯಲ್ಲ. ಇಲ್ಲಿಂದ ಹೋಗಿರಿ ಎಂದು ಕೆಂಡಾಮಂಡಲರಾದರು.
ಕೆಲವರು ಈ ಸಂದರ್ಭದಲ್ಲಿ ಅವರನ್ನು ಸಮಾಧಾನ ಪಡಿಸಲು ಮುಂದಾದರೂ ಕೂಡ ಅದು ಸಾಧ್ಯವಾಗಲಿಲ್ಲ. ಮಾಧ್ಯಮಗಳ ಮುಂದೆಯೇ ಈ ಘಟನೆ ನಡೆದಿರುವುದು ಕಾಂಗ್ರೆಸ್ ಮುಖಂಡರಿಗೆ ಮುಜುಗರ ಉಂಟು ಮಾಡಿದೆ.