ಬೆಂಗಳೂರು, ಜ.28-ಆರು ಬೋಗಿಗಳ ಮೆಟ್ರೋಯಿಂದಾಗಿ ನಗರದ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.ಇದರಲ್ಲಿ ಒಂದು ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಬಳಿಯ ಮೆಟ್ರೋ ನಿಲ್ದಾಣದಲ್ಲಿ 6 ಬೋಗಿಗಳ ಮೆಟ್ರೋ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, 3 ಬೋಗಿಗಳ ಜೊತೆಗೆ ಹೆಚ್ಚುವರಿಯಾಗಿ 3 ಬೋಗಿಗಳನ್ನು ಅಳವಡಿಕೆ ಮಾಡಲಾಗುತ್ತದೆ.ಇದರಿಂದ ದಿನನಿತ್ಯ ಮೆಟ್ರೋ ಬಳಸುವವರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.
ಎಸ್ಕಲೇಟರ್‍ನಿಂದ ಮಗು ಬಿದ್ದು ಸಾವನ್ನಪ್ಪಿರುವ ಪ್ರಕರಣದಲ್ಲಿ ಮೆಟ್ರೋ ಸಂಸ್ಥೆಯಿಂದ ಲೋಪವಾಗಿಲ್ಲ. ಇದು ಅಜಾಗರೂಕತೆಯಿಂದ ನಡೆದ ಘಟನೆಯಾಗಿದೆ ಎಂದು ಸಿಎಂ ತಿಳಿಸಿದರು.
ನಾಗರಿಕರಿಗೆ ಮನವಿ ಮಾಡುತ್ತೇನೆ. ಇಂತಹ ಸಂದರ್ಭದಲ್ಲಿ ಜನ ಎಚ್ಚರಿಕೆಯಿಂದಿರಬೇಕು.ಮೆಟ್ರೋ ಸಿಬ್ಬಂದಿಗೂ ಎಚ್ಚರಿಕೆಯಿಂದ ಇರಲು ಹೇಳಿದ್ದೇನೆ ಎಂದರು.
ಯಲಚೇನಹಳ್ಳಿಯಿಂದ ನಾಗಸಂದ್ರ ಮಾರ್ಗದಲ್ಲಿ ಮೊದಲ 6 ಬೋಗಿಯ ಮೆಟ್ರೋ ಸಂಚಾರ ಮಾಡುತ್ತಿದ್ದು, ಈ ಹಿಂದೆ ನೇರಳೆ ಮಾರ್ಗದಲ್ಲಿ ಮಾತ್ರ 6 ಬೋಗಿಗಳ ರೈಲು ಸಂಚಾರವಿತ್ತು. ಇದೀಗ ಹಸಿರು ಮಾರ್ಗದಲ್ಲೂ ಆರು ಬೋಗಿಗಳ ರೈಲನ್ನು ಓಡಿಸಲು ಬಿಎಂಆರ್‍ಸಿಎಲ್ ಮುಂದಾಗಿದೆ.
ಹಸಿರು ಮಾರ್ಗದಲ್ಲಿ ಹೆಚ್ಚು ಜನಸಂದಣಿ ಇರುವ ಸಂದರ್ಭದಲ್ಲಿ (ಪೀಕ್ ಅವರ್) ಮಾತ್ರ ಆರು ಬೋಗಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೋಗಿಯ ಮೊದಲ ಪ್ರವೇಶದ್ವಾರ ಮಹಿಳೆಯರಿಗೆ ಮೀಸಲಾಗಿದೆ.
ಮೂರು ಬೋಗಿಗಳ ರೈಲಿನಲ್ಲಿ ಸರಾಸರಿ 975 ಮಂದಿ ಪ್ರಯಾಣಿಸಬಹುದಾಗಿತ್ತು. ಹೆಚ್ಚುವರಿ 3 ಬೋಗಿಗಳ ಜೋಡಣೆಯಿಂದ 2004 ಮಂದಿ ಪ್ರಯಾಣ ಮಾಡಬಹುದಾಗಿದೆ.