ಸರ್ಕಾರದ ಪಾವಿತ್ರತೆಗೆ ಧಕ್ಕೆ ತರುವಂತ ಮಾತು ಬರಬಾರದು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಬೆಂಗಳೂರು, ಜ.28- ಸಮ್ಮಿಶ್ರ ಸರ್ಕಾರದ ಪಾವಿತ್ರಕ್ಕೆ ಧಕ್ಕೆ ತರುವಂತಹ ಮಾತುಗಳು ಬರಬಾರದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

ಜೆಡಿಎಸ್ ಕಚೇರಿ ಜೆಪಿನಗರದಲ್ಲಿ ಇಂದು ಆಯೋಜಿಸಲಾಗಿದ್ದ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಜೆಡಿಎಸ್ ಜೊತೆಗೆ ಕಾಂಗ್ರೆಸ್ ಬೆಂಬಲ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರನ್ನು ಯಾರು ಪ್ರಶ್ನೆ ಮಾಡಬಾರದು. ಮೈತ್ರಿ ಸರ್ಕಾರದ ಪಾವಿತ್ರತೆಗೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು ಎಂದು ಹೇಳಿದರು.

ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಸರ್ಕಾರದ ವಿಚಾರದಲ್ಲಿ ಅನಾವಶ್ಯಕ ಮಾತುಗಳನ್ನಾಡಬೇಡಿ.ಉಭಯ ಪಕ್ಷಗಳು ಆಡಳಿತ ನಡೆಸುತ್ತಿವೆ. ಇಂತಹ ಸರ್ಕಾರದ ಅವಧಿಯಲ್ಲಿ ಈ ರೀತಿಯ ಹೇಳಿಕೆಗಳು ಸರಿಯಲ್ಲ ಎಂದರು.

ಹೋರಾಟಗಾರರು, ಚಿಂತಕರೂ ಆದ ವೈ.ಎಸ್.ವಿ.ದತ್ತ ಅವರಿಗೆ ಪಕ್ಷದ ಪ್ರಚಾರದ ಜವಾಬ್ದಾರಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ವಹಿಸಿದ್ದಾರೆ. ಹೋರಾಟವನ್ನೇ ಮೈಗೂಡಿಸಿಕೊಂಡಿರುವ ದತ್ತ ಅವರನ್ನು ಸಮಾಜದಿಂದ ಹಲವು ಅನುಭವಗಳನ್ನು ಪಡೆದವರು. ಅಂಥವರು ಪಕ್ಷದ ಈ ಸ್ಥಾನಕ್ಕೆ ಬಂದಿರುವುದು ಸಂತೋಷದ ವಿಚಾರ ಎಂದರು.

ಮಾಜಿ ಮುಖ್ಯಮಂತ್ರಿ ದೇವರಾಜು ಅರಸು, ಗುಂಡೂರಾವ್, ಬಂಗಾರಪ್ಪ , ಬಿ.ಎಸ್.ಯಡಿಯೂರಪ್ಪ ಅವರು ಕಟ್ಟಿದ ಪ್ರಾದೇಶಿಕ ಪಕ್ಷಗಳು ಉಳಿದು ಬೆಳೆಯಲಿಲ್ಲ.

ಅವುಗಳಿಗೆ ನೆಲೆ ಸಿಗಲಿಲ್ಲ. ಆದರೆ ಜೆಡಿಎಸ್ ಪ್ರಾಂತೀಯ ಪಕ್ಷವಾಗಿ ನೆಲಜಲ ಕೃಷಿಗಾಗಿ ಹೋರಾಟ ಮಾಡುತ್ತಾ ಅಧಿಕಾರ ನೀಡಿದ್ದನ್ನು ಜತನದಿಂದ ನಡೆಸುಕೊಂಡು ಬಂದಿದೆ.

ನಮ್ಮ ರಾಜ್ಯದ ಕನ್ನಡಿಗರೊಬ್ಬರು, ದೇಶದ ಪ್ರಧಾನಿಯಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಭಾಷಣ ಮಾಡಿದ್ದಾರೆ ಎಂದು ಸ್ಮರಿಸಿದರು.

ಮುಂದಿನ ಲೋಕಸಭಾ ಚುನಾವಣೆ ಸವಾಲಿನದ್ದಾಗಿದೆ. ಇದನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ವಿಶ್ವನಾಥ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ