ಕ್ರಿಮಿನಲ್ ಗುಂಡಿಗೆ ಬಲಿಯಾದ ಪೊಲೀಸ್ ಪೇದೆ ಹರೀಶ್ ಚೌಧರಿ

ಲಕ್ನೋ, ಜ.28- ಉತ್ತರ ಪ್ರದೇಶದ ಅಮೋರಾದಲ್ಲಿ ಕುಖ್ಯಾತ ಕ್ರಿಮಿನಲ್ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಪೊಲೀಸ್ ಪೇದೆಯೊಬ್ಬರು ಹುತಾತ್ಮರಾಗಿದ್ದಾರೆ. ಎನ್‍ಕೌಂಟರ್‍ನಲ್ಲಿ 19 ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಕುಪ್ರಸಿದ್ದ ಅಪರಾಧಿ ಸಹ ಹತನಾಗಿದ್ದಾನೆ.

ಹರೀಶ್ ಚೌಧರಿ(26) ಕ್ರಿಮಿನಲ್ ಗುಂಡಿಗೆ ಬಲಿಯಾದ ಪೊಲೀಸ್ ಕಾನ್ಸ್‍ಟೆಬಲ್. ಪೊಲೀಸ್ ಎನ್‍ಕೌಂಟರ್‍ನಲ್ಲಿ ಶಿವ್ ಅವತಾರ್ ಎಂಬ ಕುಖ್ಯಾತ ಕ್ರಿಮಿನಲ್ ಸಹ ಹತನಾದ.

ನಿನ್ನೆ ರಾತ್ರಿ 8ರ ಸಮಾರಿನಲ್ಲಿ ಅಮೋರಾದ ಬಚ್ಚಾರಾಂವ್ ಪ್ರದೇಶದಲ್ಲಿ ಶಿವ್ ಅವತಾರ್ ಅವಿತಿಟ್ಟುಕೊಂಡಿರುವ ಸುದ್ದಿ ತಿಳಿದು ಪೊಲೀಸರ ತಂಡ ಅಲ್ಲಿಗೆ ತೆರಳಿ ಅವನಿದ್ದ ಸ್ಥಳವನ್ನು ಸುತ್ತುವರಿಯಿತು. ಶರಣಾಗುವಂತೆ ಕ್ರಿಮಿನಲ್‍ಗೆ ಪೊಲೀಸರು ಸೂಚಿಸಿದರಾದರೂ ಆತ ಸಿಬ್ಬಂದಿ ಮೇಲೆ ಗುಂಡು ಹಾರಿಸಿ. ಈ ವೇಳೆ ಕಾನ್ಸ್‍ಟೆಬಲ್ ಹರೀಶ್ ಚೌಧರಿ ದೇಹಕ್ಕೆ ಬುಲೆಟ್ ಹೊಕ್ಕಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟರು ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.

ಗುಂಡಿನ ಕಾಳಗದ ವೇಳೆ ತೀವ್ರ ಗಾಯಗೊಂಡ ಶಿವ್ ಅವತಾರ್ ಕೂಡ ಹತನಾದ.

ಹರೀಶ್ 2016ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಕೆಲವು ತಿಂಗಳ ಹಿಂದೆಯಷ್ಟೇ ಇವರ ವಿವಾಹವಾಗಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹುತಾತ್ಮ ಪೊಲೀಸ್ ಕುಟುಂಬಕ್ಕೆ 40 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ