ಯುಎಸ್ – ಬಾಂಗ್ಲಾ ಏರ್‌ಲೈನ್ಸ್‌ ವಿಮಾನ ದುರಂತ; 51 ಪ್ರಯಾಣಿಕರ ಸಾವಿಗೆ ಪೈಲಟ್‌ ಹೊತ್ತಿಸಿದ ಸಿಗರೇಟ್‌ ಕಾರಣ!

ನವದೆಹಲಿಯುಎಸ್-ಬಾಂಗ್ಲಾ ಏರ್‌ಲೈನ್ಸ್‌ ವಿಮಾನ ದುರಂತಕ್ಕೆ ಪೈಲೆಟ್​​ ಹೊತ್ತಿಸಿದ ಸಿಗರೇಟೇ ಕಾರಣ ಎಂದು ತನಿಖಾ ಆಯೋಗ ತಿಳಿಸಿದೆ. ವಿಮಾನದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಪೈಲಟ್‌, ನಿರ್ಬಂಧಗಳ ನಡುವೆಯೂ ಕಾಕ್‌ಪಿಟ್‌ನಲ್ಲಿಯೇ ಧೂಮಪಾನ ಮಾಡಿದ್ದಾನೆ. ಈ ವಿಮಾನ ಸಿಬ್ಬಂದಿಯ ಅಜಾಗರೂಕತೆಯ ಕಾರಣದಿಂದಲೇ ವಿಮಾನ ಪತನಗೊಂಡಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೇ ನೇಪಾಳದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಆಯೋಗ ತನಿಖಾ ವರದಿ ಸಲ್ಲಿಸಿದೆ ಎನ್ನಲಾಗಿದೆ.
ಈ ಹಿಂದೆ ಅಮೆರಿಕ-ಬಾಂಗ್ಲಾ ಏರ್​ಲೈನ್ಸ್ ವಿಮಾನವೊಂದು ನೇಪಾಳ ರಾಜಧಾನಿಯ ಏರ್​ಪೋರ್ಟ್​ನಲ್ಲಿ ಅಪಘಾತಕ್ಕೀಡಾಗಿತ್ತು. ಕಠ್ಮಂಡುವಿನ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಮಾನ 2018ರ ಮಾರ್ಚ್ 12ರಂದು ಪತನಗೊಂಡಿತ್ತು. ಈ ದುರಂತದಲ್ಲಿ 51 ಮಂದಿ ಸಾವಿಗೀಡಾಗಿದ್ದರು. 71 ಮಂದಿಯನ್ನು ಹೊತ್ತ ಈ ವಿಮಾನವು ಏರ್​ಪೋರ್ಟ್​ನ ರನ್​ವೇ ಬಳಿ ಇರುವ ಫುಟ್ಬಾಲ್ ಮೈದಾನದ​​ ಮೇಲೆ ನುಗ್ಗಿ ಬೆಂಕಿಹೊತ್ತಿಕೊಂಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿಂದತೆ ತನಿಖಾ ಆಯೋಗ ರಚಿಸಲಾಗಿತ್ತು. ಇದೀಗ ವಿಮಾನ ದುರಂತದ ತನಿಖೆ ನಡೆಸುತ್ತಿದ್ದ ಆಯೋಗವು, ಪೈಲಟ್‌ ಇನ್‌ ಕಮಾಂಡ್‌(ಪಿಕ್‌) ಧೂಮಪಾನ ಮಾಡಿರುವುದನ್ನು  ದೃಢಪಡಿಸಿದೆ. ಕಾಕ್‌ಪಿಟ್‌ ಧ್ವನಿ ಸಂಗ್ರಹದ ಪರಿಶೀಲನೆ ವೇಳೆ ಧೂಮಪಾನ ಮಾಡಿರುವುದಾಗಿ ಸಾಬೀತಾಗಿದೆ. ಆದರೆ, ಪೈಲಟ್‌ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಕಾರ್ಯನಿರ್ವಹಣಾ ವಿಭಾಗ ಯಾವುದೇ ಮಾಹಿತಿ ಹೊಂದಿಲ್ಲ ಎಂದು ಹೇಳಲಾಗುತ್ತಿದೆ.
ವಿಮಾನಯಾನದ ಸಮಯದಲ್ಲಿ ತಂಬಾಕು ಪದಾರ್ಥ ಬಳಕೆ ಮಾಡಲಾಗಿದೆ. ಇದರ ಹೊರತು ಇನ್ಯಾವುದೇ ನಿಷೇಧಿತ ವಸ್ತುಗಳ ಸೇವನೆ ಮಾಡಿಲ್ಲ. ಪರಿಸ್ಥಿತಿಯನ್ನು ಅರಿತುಕೊಳ್ಳುವಲ್ಲಿ ದಿಕ್ಕು ತೋಚದೆ ಸಿಬ್ಬಂದಿ ಸುಮ್ಮನಾದುದು ಪ್ರಯಾಣಿಕರ ಸಾವಿಗೆ ಕಾರಣ ಎಂದು ತನಿಖಾ ಆಯೋಗ ಅಭಿಪ್ರಾಯಪಟ್ಟಿದೆ. ಇನ್ನು ದುರಂತದಲ್ಲಿ ಸಾವಿಗೀಡ ಪ್ರಯಾಣಿಕರ ಶವಗಳ ಪರೀಕ್ಷೆ ನಡೆಸಿದ ಕಠ್ಮಂಡು ವಿಧಿವಿಜ್ಞಾನ ಇಲಾಖೆ, ತಲೆಗೆ ಬಲವಾದ ಹೊಡೆತಬಿದ್ದಿರುವುದರಿಂದ ಪ್ರಯಾಣಿಕರು ಮೃತಪಟ್ಟಿರುವುದಾಗಿ ಹೇಳಿದೆ. ಈಗಾಗಲೇ ಈ ಎರಡು ವರದಿಗಳನ್ನು ನೇಪಾಳದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಿದ್ದು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬಾಂಗ್ಲಾ ರಾಜಧಾನಿ ಢಾಕಾದಿಂದ ಬಂದ ಈ ವಿಮಾನವು ಕಠ್ಮಂಡು ಏರ್​ಪೋರ್ಟ್​ನ ರನ್​ವೇನಲ್ಲಿ ಲ್ಯಾಂಡ್ ಆಗುವಾಗ ಸ್ಕಿಡ್ ಆಗಿ ಪಕ್ಕದ ಮೈದಾನಕ್ಕೆ ನುಗ್ಗಿ ಈ ಅವಘಡ ಸಂಭವಿಸಿದೆ. ಫುಟ್ಬಾಲ್ ಮೈದಾನದಲ್ಲಿ ವಿಮಾನ ಉರುಳುತ್ತಿದ್ದಂತೆಯೇ ಎರಡು ಸ್ಫೋಟವಾಯಿತು. ವಿಮಾನ ಹಲವು ಚೂರುಗಳಾಗಿ ಮೈದಾನದಲ್ಲಿ ಚೆಲ್ಲಾಡಿದೆ.
ನೇಪಾಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ವಿಮಾನ ಅವಘಡಗಳು ಸಂಭವಿಸಿವೆ. ಇಲ್ಲಿಯ ಕಳಪೆ ವಾಯು ಸುರಕ್ಷತಾ ಗುಣಮಟ್ಟ, ಅನನುಭವಿ ಪೈಲಟ್​ಗಳು, ಅಸಮರ್ಪಕ ನಿರ್ವಹಣೆ ಇತ್ಯಾದಿ ಸಮಸ್ಯೆಗಳಿಂದ ನೇಪಾಳದ ವೈಮಾನಿಕ ಕ್ಷೇತ್ರ ಬಳಲುತ್ತಿದೆ. 2016ರಲ್ಲಿ ಇಲ್ಲಿಯ ಪುಟ್ಟ ವಿಮಾನವೊಂದು ಬೆಟ್ಟಕ್ಕೆ ಅಪ್ಪಳಿಸಿ ಅದರಲ್ಲಿದ್ದ ಎಲ್ಲಾ 23 ಜನರೂ ಮೃತಪಟ್ಟಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ