ಬದುಕನ್ನು ರೂಪಿಸಿಕೊಳ್ಳುವಂತಹ ಆತ್ಮವಿಶ್ವಾಸ ಮೂಡಿಸುವ ಶಿಕ್ಷಣವನ್ನು ನೀಡಬೇಕು: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು, ಜ.27- ಶಿಕ್ಷಣ ಸಂಸ್ಥೆಗಳು ವಿದ್ಯೆ ನೀಡುವುದರ ಜತೆಗೆ ಮಕ್ಕಳು ಬದುಕನ್ನು ರೂಪಿಸಿಕೊಳ್ಳುವಂತಹ ಆತ್ಮವಿಶ್ವಾಸ ಮೂಡಿಸುವ ಶಿಕ್ಷಣವನ್ನು ನೀಡಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸಿಎಂಆರ್ ಗ್ರೂಪ್‍ನ ಐಕ್ಯಾ ಶಾಲೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಆಗ ಜೀವನದ ಮೌಲ್ಯವನ್ನು ಶಿಕ್ಷಣವನ್ನಾಗಿ ನೀಡುತ್ತಿದ್ದರು. ಇದರಿಂದ ಮಕ್ಕಳು ಆತ್ಮಸ್ಥೈರ್ಯದಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದರು. ಬ್ರಿಟೀಷರ ಆಳ್ವಿಕೆ ಪದ್ಧತಿಯಿಂದ ಗುರುಕುಲ ಪದ್ಧತಿಯನ್ನು ನಿಲ್ಲಿಸಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಯಿತು. ಈ ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯ ಪುಸ್ತಕಗಳಿಗಷ್ಟೇ ಸೀಮಿತವಾಗಿವೆ. ಇದರಿಂದ ಬದುಕಿನಲ್ಲಿ ದೊಡ್ಡ ಸಮಸ್ಯೆಗಳು ಎದುರಾದಾಗ ಅದನ್ನು ಎದುರಿಸಲಾಗದೆ ಮಕ್ಕಳು ವಿಚಲಿತರಾಗುತ್ತಿದ್ದಾರೆ. ಪಠ್ಯದ ಜತೆಗೆ ಮಕ್ಕಳಲ್ಲಿ ಆತ್ಮಬಲ ನೀಡುವಂತಹ ಶಿಕ್ಷಣ ಬೇಕಾಗಿದೆ. ಪೋಷಕರೂ ಕೂಡ ಅಂಕಗಳಿಸಲಷ್ಟೇ ತಮ್ಮ ಮಕ್ಕಳ ಮೇಲೆ ಒತ್ತಡ ಹಾಕದೆ ಬದುಕಿನ ಮೌಲ್ಯ ಕಲಿಸಬೇಕೆಂದು ಸಲಹೆ ಮಾಡಿದರು.

ಬೆಂಗಳೂರು ಶೈಕ್ಷಣಿಕ ಹಬ್ ಆಗಿ ಮಾರ್ಪಡುತ್ತಿದ್ದು, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಶಾಖೆಗಳನ್ನು ತೆರೆದಿವೆ. ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಶಾಸಕ ಬೈರತಿ ಬಸವರಾಜ್, ಸಿಎಂಆರ್ ಗ್ರೂಪ್‍ನ ಅಧ್ಯಕ್ಷೆ ಡಾ.ಸಬಿತಾ ರಾಮಮೂರ್ತಿ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ