ಬೆಂಗಳೂರು, ಜ.27-ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.
ನೈಸ್ ರಸ್ತೆಯ ಸೋಂಪುರ ಗೇಟ್ ಬಳಿಯ ಜಟ್ಟಿಗರಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ಕನಕ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕಷ್ಟಗಳು ಏನೇ ಇದ್ದರೂ ನಾವು ಸಿದ್ದರಾಮಯ್ಯ ಅವರ ಬಳಿಯೇ ಹೇಳಿಕೊಳ್ಳುತ್ತೇವೆ. ತಾವು ಮೂರು ಬಾರಿ ಶಾಸಕರಾಗಲು ಸಿದ್ದರಾಮಯ್ಯ ಅವರೇ ಕಾರಣ. ಯಾರು ಏನೇ ಹೇಳಿದರೂ ನಮಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ತಿಳಿಸಿದರು.
ಶಾಸಕ ಸುಧಾಕರ್ ಹೇಳಿದಂತೆ ನಮಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದರು.
ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗದ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯದ ದನಿಯಾಗಿ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಅವರನ್ನು ಹಸುವಿಗೆ ಹೋಲಿಸಿದ ಶ್ರೀಗಳು ಸಿದ್ದರಾಮಯ್ಯ ಯಾವಾಗಲೂ ಪರೋಪಕಾರಿ ಎಂದರು.
ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು. ನಾಡಿನ ಜನತೆಗೆ ಸಿದ್ದರಾಮಯ್ಯ ಅವರು ನೀಡಿರುವ ಯೋಜನೆಗಳು ಪೂರ್ಣವಾಗಬೇಕು. ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ ಅನುದಾನ ಬಿಡುಗಡೆಯಾಗಿಲ್ಲ ಎಂದರು.
ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಸಿದ್ದರಾಮಯ್ಯ ಅವರು ನಮಗೆಲ್ಲ ನಾಯಕರಾಗಿದ್ದಾರೆ. ಎಲ್ಲ ಜಾತಿ, ಸಮುದಾಯದವರಿಗೆ ರಾಜಕೀಯವಾಗಿ ಅವಕಾಶ ಕಲ್ಪಿಸಿದ್ದಾರೆ. ಕೆಲವರು ಮಗ-ಸೊಸೆಗೆ ಮಾತ್ರ ರಾಜಕೀಯ ಅವಕಾಶ ಕೊಡುತ್ತಾರೆ ಎಂದು ಪರೋಕ್ಷವಾಗಿ ಎಚ್.ಡಿ.ದೇವೇಗೌಡರನ್ನು ಟೀಕಿಸಿದರು.
ಸಿದ್ದರಾಮಯ್ಯ ಅವರು ಮತ್ತೆ ಐದು ವರ್ಷ ಅಧಿಕಾರದಲ್ಲಿ ಇದ್ದಿದ್ದರೆ ಬಹಳಷ್ಟು ಅಭಿವೃದ್ದಿಯಾಗುತ್ತಿತ್ತು. ಮೈತ್ರಿ ಸರ್ಕಾರ ಬಂದು ಏಳು ತಿಂಗಳು ಕಳೆದರೂ ಇದುವರೆಗೂ ಬೆಂಗಳೂರು ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮನ್ನು ಸಿದ್ದರಾಮಯ್ಯ ಅವರು ಬಿಡಿಎ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಒಂದು ಮಾತು ಹೇಳಿದರೂ ಹೆಚ್ಚುಕಡಿಮೆಯಾಗುತ್ತದೆ ಎಂದರು.
ಸಿದ್ದರಾಮಯ್ಯ ಅವರು 5ವರ್ಷ ಮುಖ್ಯಮಂತ್ರಿಯಾಗಿದ್ದರೂ ಚುನಾವಣೆಗೆ ಸಾಲ ಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಒಳಸಂಚು ಮಾಡಲಾಯಿತು. ಚುನಾವಣೆಯಲ್ಲಿ ಮಾಡಿದ ಸಾಲ ತೀರಿಸಲು ಸಿದ್ದರಾಮಯ್ಯ ಅವರಿಗೆ ಆಗುತ್ತಿಲ್ಲ ಎಂಬ ಮಾಹಿತಿ ಕೇಳಿ ನೋವಾಗುತ್ತದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದರು.
ಸಚಿವರಾದ ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.