ಬ್ರೆಜಿಲ್​ನಲ್ಲಿ ಭಾರೀ ದುರಂತ; ಡ್ಯಾಮ್​ ಸ್ಫೋಟವಾಗಿ 40 ಸಾವು, ಮಣ್ಣಿನಡಿ ಸಿಲುಕಿರುವ 300ಕ್ಕೂ ಹೆಚ್ಚು ಮಂದಿ

ಬ್ರೆಜಿಲ್: ದಕ್ಷಿಣ ಬ್ರೆಜಿಲ್​ನಲ್ಲಿ ಡ್ಯಾಮ್​ ಒಡೆದ ಕಾರಣ ಗಣಿಗಾರಿಕೆಯ ತ್ಯಾಜ್ಯಗಳೆಲ್ಲ ಕೊಚ್ಚಿಕೊಂಡು ಹೋಗಿ ಇದುವರೆಗೂ ಸುಮಾರು 40 ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಜನರು ಮಣ್ಣಿನಡಿ ಸಿಲುಕಿದ್ದಾರೆ. ಈಗಾಗಲೇ ಹೆಲಿಕಾಪ್ಟರ್​ ಮೂಲಕ ಹುಡುಕಾಟ ನಡೆಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಡ್ಯಾಮ್​ನ ನೀರು ಒಮ್ಮೆಲೆ ನುಗ್ಗಿದ ಹಿನ್ನೆಲೆಯಲ್ಲಿ ಸುತ್ತಮುತ್ತಲೂ ಸಂಪೂರ್ಣ ಕೆಸರಿನಿಂದ ಆವೃತವಾಗಿದೆ. ಹೀಗಾಗಿ, ಕೆಸರಿನ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚುವುದೂ ಸಾಹಸದ ಕೆಲಸವಾಗಿದೆ.

ಘಟನೆಯಲ್ಲಿ 300ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದು, ಕೆಸರಿನ ಅಡಿಯಲ್ಲಿ ಸಿಲುಕಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಾಗ ಮಳೆಯೂ ಬರುತ್ತಿರುವುದರಿಂದ ರಕ್ಷಣಾ ಸಿಬ್ಬಂದಿಗೆ ಕಾರ್ಯಾಚರಣೆ ನಡೆಸಲು ಬಹಳ ತೊಂದರೆಯಾಗುತ್ತಿದೆ. ಇನ್ನು, ಘಟನೆಗೆ ಕಾರಣರಾಗಿರುವವರ ಬಗ್ಗೆ ಜನರು ಆಕ್ರೋಶ ಹೊರಹಾಕುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವ ತನಕ ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ನಾನು ನೋಡಿದಾಗ ಗುಡ್ಡದಿಂದ ಮಣ್ಣ ಕುಸಿದುಬೀಳುತ್ತಿತ್ತು. ಅದರೊಂದಿಗೆ ಮರಗಳೂ ಉರುಳುತ್ತಿದ್ದವು. ಏನಾಗುತ್ತಿದೆ ಎಂದು ಅರ್ಥವಾಗುವಷ್ಟರಲ್ಲಿ ಗಾಢ ಕೆಂಪು ಬಣ್ಣದ ನೀರು ಎಲ್ಲ ಕಡೆ ನುಗ್ಗಿಬಿಟ್ಟಿತ್ತು. ಆ ಶಬ್ದ, ಆ ಅಬ್ಬರ, ಆ ದೃಶ್ಯವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಹಾನಿಗೊಳಗಾದ ಪ್ರದೇಶದಿಂದ 8 ಕಿ.ಮೀ. ದೂರದಲ್ಲಿರುವ ಪರಕ್​ ಕಕೋರ ಎಂಬಲ್ಲಿ ಇದ್ದ ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಜೋರಾದ ಶಬ್ದ ಕೇಳುತ್ತಿದ್ದಂತೆ ನಾವು ಎತ್ತರದ ಜಾಗಕ್ಕೆ ಕಾರಿನಲ್ಲಿ ಹೋದೆವು. ಈಗ ನಮ್ಮ ಮನೆ ಇರುವ ಜಾಗವೂ ಸಂಪೂರ್ಣ ಕೆಸರಿನಿಂದ ಆವೃತವಾಗಿದೆ. ನಾವು ಬೇರೆ ದಿಕ್ಕಿನತ್ತ ಹೊರಟಿದ್ದರೆ ಖಂಡಿತ ಬದುಕಿ ಉಳಿಯುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ನಿನ್ನೆ ಸಂಜೆಯವರೆಗೆ 40 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನುಳಿದ 23 ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದುವರೆಗೂ 43ಕ್ಕೂ ಹೆಚ್ಚು ಜನರನ್ನು ಕಾಪಾಡಲಾಗಿದೆ. ಹಾಗೇ, ಕಂಪನಿಯ ಸುಮಾರು 100 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಆದರೆ 200ಕ್ಕೂ ಹೆಚ್ಚು ಕೆಲಸಗಾರರು ನಾಪತ್ತೆಯಾಗಿದ್ದಾರೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದಾಗಿ 300ಕ್ಕೂ ಹೆಚ್ಚು ಕೆಲಸಗಾರರು ಅಲ್ಲಿದ್ದರು. ಘಟನೆ ನಡೆಯಲು ಕಾರಣವೇನೆಂದು ತಿಳಿದುಬಂದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ