70ನೇ ಗಣರಾಜ್ಯೋತ್ಸವ ಹಿನ್ನಲೆ: ರಾಜಫದಲ್ಲಿ ಗಮನ ಸೆಳೆದ ಕರ್ನಾಟಕದ ಮಹಾತ್ಮ ಗಾಂಧೀಜಿ-ಬೆಳಗಾವಿ ಅಧಿವೇಶನ ಸ್ತಬ್ಧಚಿತ್ರ

ನವದೆಹಲಿ: 70ನೇ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಈ ಬಾರಿ ದೆಹಲಿಯ ರಾಜಪಥದಲ್ಲಿ ನಡೆದ ಪೆರೇಡ್ ನಲ್ಲಿ ಕರ್ನಾಟಕದ ‘ಮಹಾತ್ಮ ಗಾಂಧೀಜಿ-ಬೆಳಗಾವಿ ಕಾಂಗ್ರೆಸ್ ಅಧಿವೇಶನ ವಿಷಯಾಧಾರಿತ ಸ್ತಬ್ದಚಿತ್ರ ಕಣ್ಮನ ಸೆಳೆಯಿತು.

ರಕ್ಷಣಾ ಸಚಿವಾಲಯವೇ ಮಹಾತ್ಮಗಾಂಧಿಯವರ 150ನೇ ಜನ್ಮದಿನಚರಣೆ ಅಂಗವಾಗಿ ಈ ಬಾರಿ ಎಲ್ಲಾ ರಾಜ್ಯಗಳಿಗೂ ಮಹಾತ್ಮಗಾಂಧಿಯವರ ಜೀವನಾಧರಿತ ಸ್ತಬ್ಧಚಿತ್ರದ ಪರಿಕಲ್ಪನೆ ಕಳುಹಿಸುವಂತೆ ಸೂಚಿಸಿತ್ತು. ಇಲಾಖೆಯ ಕಾರ್ಯದರ್ಶಿ ಮತ್ತು ನಿರ್ದೇಶಕರನ್ನೊಳಗೊಂಡ ಸಮಿತಿ ವಿವಿಧ ನಾಲ್ಕು ವಿಷಯಗಳನ್ನು ಒಳಗೊಂಡ ಸ್ತಬ್ಧಚಿತ್ರದ ಮಾದರಿಗಳನ್ನು ರಕ್ಷಣಾ ಮಂತ್ರಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಅಂತಿಮವಾಗಿ ರಕ್ಷಣಾಮಂತ್ರಾಲಯ ನೇಮಿಸಿದ್ದ ತಜ್ಞರ ಸಮಿತಿ ಬೆಳಗಾವಿ ಕಾಂಗ್ರೆಸ್ ಅಧಿವೇಶನ ವಿಷಯಾಧಾರಿತ ಸ್ತಬ್ದಚಿತ್ರವನ್ನು ಆಯ್ಕೆ ಮಾಡಿತ್ತು.

1924ರ ಡಿಸೆಂಬರ್ 26 ಮತ್ತು 27 ರಂದು ಬೆಳಗಾವಿಯಲಿ ನಡೆದ ಕಾಂಗ್ರೆಸ್ ಅಧಿವೇಶನ ಒಂದು ಐತಿಹಾಸಿಕ ಮಹತ್ವದ ಘಟನೆಯಾಗಿದೆ. ಏಕೆಂದರೆ ಇದು ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಮಹಾ ಅಧಿವೇಶನವಾಗಿದೆ. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ 39 ನೇ ಮಹಾಧಿವೇಶನಕ್ಕೆ ಕನ್ನಡ ಜನತೆ ಅತ್ಯುತ್ಸಾಹದ ಪ್ರತಿಕ್ರಿಯೆ ಮತ್ತು ಬೆಂಬಲ ವ್ಯಕ್ತವಾಗಿತ್ತು. ಕಲಾವಿದ ಶಶಿಧರ ಅಡಪ ಅವರು ಸ್ತಬ್ಧಚಿತ್ರದ ವಿನ್ಯಾಸ ಮಾಡಿದ್ದು, ಪ್ರವೀಣ್ ಡಿ.ರಾವ್ ಅವರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಗೀತೆಯನ್ನು ಸಂಗೀತ ರಚನೆ ಮಾಡಿದ್ದಾರೆ. ಸ್ತಬ್ಧಚಿತ್ರದ ನಿರ್ಮಾಣ ಕಾರ್ಯಕ್ಕೆ ಜನವರಿ 5 ರಂದು ಚಾಲನೆ ನೀಡಲಾಗಿತ್ತು.

ಕರ್ನಾಟಕ ಸತತ 10 ವರ್ಷಗಳಿಂದ ಆಯ್ಕೆಯಾಗುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿ. ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಇಲಾಖೆ ಸಿದ್ದಪಡಿಸಿದ್ದ ಸ್ತಬ್ದಚಿತ್ರಗಳ ಪೈಕಿ ಈವರಿಗೆ 5 ಬಾರಿ ಪ್ರಶಸ್ತಿ ಸಂದಿದೆ. ಈ ಬಾರಿಯೂ ಸ್ತಬ್ಧಚಿತ್ರದ ವಸ್ತುವಿಷಯ ವಿಶೇಷತೆಯಿಂದ ಕೂಡಿದ್ದು, ಸ್ತಬ್ಧಚಿತ್ರದ ನಿರ್ಮಾಣ ಸುಂದರವಾಗಿ ಮೂಡಿಬಂದಿದ್ದು ಈ ಸಾಲಿನಲ್ಲೂ ಪ್ರಶಸ್ತಿ ಲಭಿಸಲಿದೆಯೇ ಕಾದುನೋಡಬೇಕಿದೆ.

‘ಮಹಾತ್ಮ ಗಾಂಧಿ-ಬೆಳಗಾವಿ ಕಾಂಗ್ರೆಸ್ ಅಧಿವೇಶನ’ ವಿಷಯಾಧಾರಿತ ಸ್ತಬ್ಧಚಿತ್ರದಲ್ಲಿ 1924ರಲ್ಲಿ ನಡೆದ ಬೆಳಗಾವಿ ಅಧಿವೇಶನದ ಅಕ್ಷರಶಃ ವೇದಿಕೆಯನ್ನೆ ಸ್ತಬ್ಧಚಿತ್ರದಲ್ಲಿ ಮೂಡಿಸಲಾಗಿದೆ. ಸಂಶೋಧನ ವಿದ್ಯಾರ್ಥಿಯಂತೆ ಪ್ರತಿಯೊಂದು ವಿಷಯಗಳಿಗೂ ಇತಿಹಾಸದ ದಾಖಲೆಗಳನ್ನು ಸಂಗ್ರಹಿಸಿ ರಕ್ಷಣಾ ಇಲಾಖೆಯ ಸ್ತಬ್ಧಚಿತ್ರದ ಆಯ್ಕೆ ಸಮಿತಿಯ ಮುಂದೆ ಪ್ರದರ್ಶಿಸಲಾಯಿತು. ನಮ್ಮ ರಾಷ್ಟ್ರಧ್ವಜದ ನಿರ್ಮಾಣವೇ ರೋಚಕತೆಯಿಂದ ಕೂಡಿದೆ. ರಾಷ್ಟ್ರಧ್ವಜದ ಪರಿಕಲ್ಪನೆ ಮೊದಲ ಬಾರಿಗೆ ಬೆಳಗಾವಿ ಅಧಿವೇಶನದಲ್ಲಿ ರೂಪಗೊಂಡಿತು, ನಮ್ಮ ಪ್ರಸ್ತುತ ರಾಷ್ಟ್ರಧ್ವಜ ಸತತ 16 ವರ್ಷಗಳ ಬಳಿಕ ನಿರಂತರ ಬದಲಾವಣೆ ಬಳಿಕ ಅಂತಿಮವಾಗಿ ಕೇಸರಿ-ಬಿಳಿ-ಹಸಿರು ಬಣ್ಣದ ತ್ರಿರಂಗ ರಾಷ್ಟ್ರಧ್ವಜ ಸಿದ್ದಗೊಂಡಿತು. ಇದನ್ನು ಸಹ ನಮ್ಮ ಸ್ತಬ್ಧಚಿತ್ರದಲ್ಲಿ ಚಿತ್ರಿಸಲಾಗಿದೆ.

70th Republic day,rajpath,karnataka tableau,Belgaum INC session

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ