ನವದೆಹಲಿ: ದೇಶಾದ್ಯಂತ 70ನೇ ಗಣರಾಜ್ಯೋತ್ಸವದ ಸಂಭ್ರಮ. ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥದಲ್ಲಿ ಎನ್ನೆಸ್ಸೆಸ್, ಎನ್‌ಸಿಸಿ ಕೆಡೆಟ್‌ಗಳ ಆಕರ್ಷಕ ಗಣರಾಜ್ಯೋತ್ಸವ ಪಥಸಂಚಲನ ನಡೆಸಿದವು.
ಇದಕ್ಕೂ ಮುನ್ನ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಗಣರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು. ಗಣರಾಜ್ಯೋತ್ಸವದ ಪ್ರಮುಖ ಅತಿಥಿಯಾಗಿ ಆಗಮಿಸಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೊಸ ಅವರು ಪ್ರಧಾನಿ ಅವರಿಗೆ ಸಾಥ್ ನೀಡಿದರು.
ವಿಜಯ ಚೌಕದಿಂದ ಬೆಳಗ್ಗೆ 9:50ಕ್ಕೆ ಪಥಸಂಚಲನ ಆರಂಭವಾಗಿದ್ದು, ರಾಜಪಥ, ತಿಲಕ್ ಮಾರ್ಗ, ಬಹದ್ದೂರ್ ಶಾ ಝಫರ್ ಮಾರ್ಗ, ನೇತಾಜಿ ಸುಭಾಷ್ ಮಾರ್ಗವಾಗಿ ಸಾಗಿ ಕೆಂಪು ಕೋಟೆ ತಲುಪಿತು 90 ನಿಮಿಷಗಳ ಪೆರೇಡ್ನಲ್ಲಿ ವಿವಿಧ ರಾಜ್ಯಗಳ ಹಾಗೂ ಸರ್ಕಾರಿ ಇಲಾಖೆಗಳ 22 ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.
ವಿಶೇಷವಾಗಿ ಕರ್ನಾಟಕ ಸ್ತಬ್ಧಚಿತ್ರದ ಮೂಲಕ ಗಾಂಧಿಗೆ ನಮನ ಸಲ್ಲಿಸಲಾಯಿತು ಸ್ತಬ್ಧಚಿತ್ರದಲ್ಲಿ ಬೆಳಗಾವಿ ಅಧಿವೇಶದ ದೃಶ್ಯ, ಮಾರ್ದನಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡು ವಿಶೇಷವಾಗಿತ್ತು.
ಇನ್ನು ಈ ಬಾರಿ ಗಣರಾಜ್ಯೋತ್ಸವದಲ್ಲಿ ವಿಶೇಷವಾಗಿ ನಾರಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದ್ದು, ಅಸ್ಸೋಂ ರೈಫಲ್ಸ್ ನೇತೃತ್ವದಲ್ಲಿ ಮಹಿಳಾ ಪಡೆ ಪಥಸಂಚನ, ನೌಕಾದಳ, ಭೂ ಸೇನೆಯ ಪೆರೇಡ್ನಲ್ಲಿ ಮಹಿಳಾ ಅಧಿಕಾರಿಗಳ ನೇತೃತ್ವ ಹಾಗೂ ಓರ್ವ ಮಹಿಳಾ ಅಧಿಕಾರಿ ಬೈಕ್ ಸಾಹಸವನ್ನೂ ಪ್ರದರ್ಶಿಸಿದ ಪರಿ ರೋಮಾಂಚನಕಾರಿಯಾಗಿತ್ತು.
ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ದೆಹಲಿಯಾದ್ಯಂತ ಭಾರಿ ಬಂದೋಬಸ್ತ್ ಮಾಡಲಾಗಿದೆ. 25 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 36 ಮಹಿಳಾ ಕಮಾಂಡರ್ಗಳು, ಮೊಬೈಲ್ ಹಿಟ್ ಟೀಂ, ಆ್ಯಂಟಿ ಏರ್ಕ್ರಾಫ್ಟ್ ಗನ್ಸ್ ಹಾಗೂ ಶಾರ್ಪ್ ಶೂಟರ್ಗಳನ್ನು ವ್ಯವಸ್ಥಿತ ತಾಣಗಳಲ್ಲಿ, ರಾಜಪಥದಿಂದ ಕೆಂಪು ಕೋಟೆವರೆಗಿನ 8 ಕಿ.ಮೀವರೆಗೆ ನಿಯೋಜಿಸಲಾಗಿದೆ. ಕಣ್ಗಾವಲಿಗಾಗಿ ಹಲವಾರು ಸಿಸಿಟಿವಿಗಳನ್ನು ಹಾಕಲಾಗಿದೆ.
Republic Day,Rajpath,Parade