ಮುಂದಿನ ಶೈಕ್ಷಣಿಕ ವರ್ಷದಿಂದ ಏಕರೂಪ ಶುಲ್ಕ ವ್ಯವಸ್ಥೆ; ಸಚಿವ ಜಿ.ಟಿ.ದೇವೆಗೌಡ

ಬೆಂಗಳೂರು, ಜ.24- ಮುಂದಿನ ಶೈಕ್ಷಣಿಕ ವರ್ಷದಿಂದ ಆನ್‍ಲೈನ್ ಮೂಲಕ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಹಾಗೂ ಏಕರೂಪ ಶುಲ್ಕ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೇಶಾವಕಾಶಕ್ಕೆ ಸಂಬಂಧಿಸಿದಂತೆ ಆಯಾ ವಿಶ್ವವಿದ್ಯಾನಿಲಯಗಳಲ್ಲಿ ಪರೀಕ್ಷಾ ಕೇಂದ್ರ ತೆರೆದು ಆನ್‍ಲೈನ್ ಮೂಲಕವೇ ಪರೀಕ್ಷೆ ನಡೆಸಿ ಪ್ರವೇಶಾವಕಾಶ ನೀಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಲಾಗಿದೆ.ಅಲ್ಲದೆ, ಬೋಧಕ ಸಿಬ್ಬಂದಿಗೆ ಕಡ್ಡಾಯವಾಗಿ ತರಬೇತಿ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.ಇಂದಿನ ದಿನಮಾನಕ್ಕೆ ತಕ್ಕಂತೆ ಬದಲಾವಣೆಗೆ ಅನುಗುಣವಾಗಿ ಬೋಧಕ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದರು.

ಸ್ಥಳೀಯ ಕೈಗಾರಿಕೋದ್ಯಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿ ವಿವಿಯಲ್ಲೂ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ತೆರೆಯಲಾಗುವುದು.ಫೆಬ್ರವರಿಯಲ್ಲಿ ವಿವಿಧ ಪರಿಣಿತರ ಸಮಿತಿಗಳನ್ನು ರಚಿಸಿ ಒಂದು ತಿಂಗಳೊಳಗಾಗಿ ವರದಿ ಪಡೆದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹಲವು ಸುಧಾರಣೆಗಳನ್ನು ಜಾರಿಗೆ ತರಲಾಗುವುದು.ಅಲ್ಲದೆ, ಪ್ರತಿ ವಿಶ್ವವಿದ್ಯಾನಿಲಯವು ಕನಿಷ್ಠ 5 ಗ್ರಾಮ ಗಳನ್ನು ದತ್ತು ಪಡೆದು ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ವಿವಿಯ ಪಠ್ಯಕ್ರಮದ ಬಗ್ಗೆಯೂ ಪರಿಣಿತರ ಸಮಿತಿ ರಚಿಸಿ ಆ ಸಮಿತಿ ನೀಡುವ ವರದಿಗನುಗುಣವಾಗಿ ಪಠ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ಆಯಾ ಉದ್ಯೋಗಕ್ಕೆ ತಕ್ಕಂತೆ ಉದ್ಯೋಗಕಾಕ್ಷಿಗಳಿಗೆ ತರಬೇತಿ ನೀಡಲಾಗುವುದು. ಮುಂದಿನ ವರ್ಷ ಉಪನ್ಯಾಸಕರ ವರ್ಗಾವಣೆಗೆ ತಕ್ಕಂತೆ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.

12ಸಾವಿರ ಅತಿಥಿ ಉಪನ್ಯಾಸಕರಿದ್ದು, ಅವರಿಗೆ ನೇಮಕಾತಿಯಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗಿದೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 3800 ಉಪನ್ಯಾಸಕರು ಹಾಗೂ 395 ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ