ಬೆಂಗಳೂರು,ಜ.24- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತವರು ಜಿಲ್ಲೆಯಲ್ಲಿ ಬಿಜೆಪಿ ವಿರುದ್ಧ ಮೊಳಗಿಸಿದ ರಣ ಕಹಳೆ, ಮುಂದಿನ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಜೋಡಿ ನಿದ್ದೆಯನ್ನು ಕೆಡಿಸಿರುವುದು ಗುಟ್ಟಾಗಿ ಉಳಿದಿಲ್ಲ.
ಕೋಲ್ಕತ್ತಾ ಸಮಾವೇಶದ ನಂತರ ಇದೀಗ ಪ್ರಾದೇಶಿಕ ಪಕ್ಷಗಳು ತಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ದೇಶಾದ್ಯಂತ ರ್ಯಾಲಿಗಳನ್ನು ನಡೆಸುವ ಮೂಲಕ ಬಿಜೆಪಿಯನ್ನು ಶತಾಯಗತಾಯ ಅಧಿಕಾರದಿಂದ ದೂರವಿಡಲು ಮುಂದಾಗಿದೆ.
ಇದೀಗ ಬೆಂಗಳೂರಿನಲ್ಲೂ ಕೋಲ್ಕತ್ತಾ ಮಾದರಿಯಲ್ಲೇ ಬೃಹತ್ ಸಮಾವೇಶ ನಡೆಸಲು ಜೆಡಿಎಸ್ ಮುಂದಾಗಿದ್ದು, ಕರುನಾಡಿನಿಂದಲೇ ಮತ್ತೊಂದು ಸಂದೇಶವನ್ನು ದೆಹಲಿಗೆ ರವಾನಿಸಲು ದಳಪತಿಗಳು ಸಜ್ಜಾಗಿದ್ದಾರೆ.
ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ವೇಳೆ ಮಹಾಘಟ್ಬಂಧನ್ನ ಅನೇಕ ನಾಯಕರು ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದರು.
ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ನ ಅಧಿನಾಯಕಿ ಸೋನಿಯಾಗಾಂಧಿ, ಎನ್ಸಿಪಿಯ ಶರತ್ ಪವಾರ್,ಬಿಎಸ್ಪಿ ಮಾಯಾವತಿ, ಆರ್ಎಲ್ಡಿಯ ಅಜಿತ್ ಸಿಂಗ್, ಸಿಪಿಎಂನ ಪ್ರಕಾಶ್ ಕಾರಟ್, ಆರ್ಜಿಡಿಯ ತೇಜಸ್ವಿ ಯಾದವ್ ಸೇರಿದಂತೆ ವಿವಿಧ ಪ್ರಾದೇಶಿಕ ಪಕ್ಷಗಳ ಘಟಾನುಘಟಿ ನಾಯಕರು ಭಾಗವಹಿಸಿ ಕೇಂದ್ರದ ವಿರುದ್ಧ ಶಕ್ತಿಯನ್ನು ಸಾಕ್ಷೀಕರಿಸಿದ್ದರು.
ಯಾವಾಗ ಮಧ್ಯಪ್ರದೇಶ , ಛತ್ತೀಸ್ಘಡ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ವಿರುದ್ಧ ಜನಾದೇಶ ಹೊರಬಿತ್ತೋ ಅಂದೇ ಪ್ರಾದೇಶಿಕ ಪಕ್ಷಗಳು ಕೈಕೊಡವಿ ಬಿಜೆಪಿ ವಿರುದ್ಧ ತೊಡೆತಟ್ಟಲು ಮುಂದಾದವು.
ಈಗ ಬೆಂಗಳೂರಿನಲ್ಲಿ ಕೋಲ್ಕತ್ತಾದಂತೆ ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸುವ ಮೂಲಕ ಮತ್ತೆ ಶಕ್ತಿ ಪ್ರದರ್ಶಿಸಲು ಪ್ರಾದೇಶಿಕ ಪಕ್ಷಗಳ ಒಕ್ಕೂಟ ಮುಂದಾಗಿದೆ.
ಈ ಬಾರಿ ಸಮಾವೇಶದ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಹಿಸಿಕೊಳ್ಳಲಿದ್ದಾರೆ. ಕಾರಣ ಕೋಲ್ಕತ್ತಾದಲ್ಲಿ ಎಚ್ಡಿಕೆ ಅವರು ಪ್ರಾರಂಭದಲ್ಲಿ ಬಂಗಾಳಿ ಭಾಷೆಯಲ್ಲಿ ಮಾತನಾಡುವ ಮೂಲಕ ದೀದಿಯ ಮನ ಗೆದ್ದಿದ್ದರು. ಅಲ್ಲದೆ ತಮ್ಮ 15 ನಿಮಿಷಗಳ ಭಾಷಣದಲ್ಲಿ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸುವ ಜೊತೆಗೆ ಎರಡು ಅವಧಿಗೆ ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿಯ ವ್ಯಕ್ತಿತ್ವವನ್ನು ಗುಣಗಾನ ಮಾಡಿದ್ದರು.
ರಾಷ್ಟ್ರವನ್ನು ಮುನ್ನೆಡೆಸುವ ಶಕ್ತಿ ದೀದಿಗೆ ಇದೆ.ಮುಂದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿಯೇ ಕೇಂದ್ರದಲ್ಲಿ ಸರ್ಕಾರ ರಚನೆಗೆ ಸಿದ್ದ ಎಂಬ ಸಂದೇಶವನ್ನು ಕುಮಾರಸ್ವಾಮಿ ರವಾನಿಸಿದ್ದರು.
ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಸಮಾವೇಶಕ್ಕೆ ಕಾಂಗ್ರೆಸ್ ಕೈ ಜೋಡಿಸುವ ಬಗ್ಗೆ ಗೊಂದಲ ಸ್ಥಿತಿಯಲ್ಲಿದೆ. ಕಾರಣ ಇಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಅಣತಿಯಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಕೋಲ್ಕತ್ತಾದ ಸಮಾವೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಯಾಗಿ ಹೋಗಿದ್ದರು. ಆದರೆ ಈ ಸಮಾವೇಶ ಯಶಸ್ವಿಯಾಗಿ ರಾಷ್ಟ್ರ ರಾಜಕಾರಣಕ್ಕೆ ಹೊಸ ಸಂದೇಶ ನೀಡಲಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾರೈಸಿದ್ದರು.