ಬೆಂಗಳೂರು, ಮಾ.13- ಇದೇ ಮಾರ್ಚ್ 16 ರಿಂದ ಮೂರು ದಿನಗಳ ಕಾಲ ನವದೆಹಲಿಯಲ್ಲಿ ಎಐಸಿಸಿ ಮಹಾಧಿವೇಶನ ನಡೆಯಲಿದೆ.
ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮಹಾಧಿವೇಶನದಲ್ಲಿ ಬ್ಲಾಕ್ ಅಧ್ಯಕ್ಷರಿಂದ ಹಿಡಿದು ಎಐಸಿಸಿ ಅಧ್ಯಕ್ಷರವರೆಗೆ ಎಲ್ಲರೂ ಪಾಲ್ಗೊಳ್ಳಲಿದ್ದಾರೆ.
ರಾಹುಲ್ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಮಹಾಧಿವೇಶನ ಇದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲ ಎಐಸಿಸಿ ಪದಾಧಿಕಾರಿಗಳು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ದೇಶದಲ್ಲಿ ಕೃಷಿ ಬೆಳವಣಿಗೆ ಕುಂಠಿತ, ಕೃಷಿ ಬೆಳವಣಿಗೆ ಕುಂಠಿತ, ನಿರುದ್ಯೋಗ ಸಮಸ್ಯೆ ಹೆಚ್ಚಳ, ರಾಜಕೀಯ ಏರಿಳಿತ, ಆರ್ಥಿಕ ಸಂಕಷ್ಟ, ಕೈಗಾರಿಕಾ ಪರಿಸ್ಥಿತಿ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
ಎಐಸಿಸಿ ಕಾರ್ಯಕಾರಿ ಮಂಡಳಿ ಈಗಾಗಲೇ ಅಧಿವೇಶನದ ಬಗ್ಗೆ ರೂಪುರೇಷೆ ಸಿದ್ಧಪಡಿಸಿದೆ.
ದೇಶಾದ್ಯಂತ ಕಾಂಗ್ರೆಸ್ ಸಂಕಷ್ಟ ಪರಿಸ್ಥಿತಿಯಲ್ಲಿದೆ. ಮತ್ತೆ ಕಾಂಗ್ರೆಸ್ ಪಕ್ಷವನ್ನು ಕಟ್ಟಬೇಕಿದೆ. ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಇಡೀ ದೇಶ ನೋಡುತ್ತಿದೆ. ಕಾಂಗ್ರೆಸ್ ಪಕ್ಷ ಇಲ್ಲಿ ಮತ್ತೆ ನೆಲೆಗೊಳ್ಳುವ ಮೂಲಕ ದೇಶದಲ್ಲಿ ಮತ್ತೆ ಎದ್ದು ನಿಲ್ಲಬೇಕಿದೆ. ಅಲ್ಲದೆ, 2019ರ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಅದಕ್ಕಾಗಿ ಈ ಅಧಿವೇಶನ ಸಾಕಷ್ಟು ಮಹತ್ವ ಪಡೆದುಕೊಳ್ಳಲಿದೆ.
ಕಾಂಗ್ರೆಸ್ನ ಹಲವು ಹಳೆಯ ರೀತಿ-ರಿವಾಜುಗಳನ್ನು ಬದಲಿಸಬೇಕೆಂಬ ಮಾತುಗಳು ಕೇಳಿಬಂದಿವೆ. ಟಿಕೆಟ್ ಹಂಚಿಕೆಯ ಮಾರ್ಗಸೂಚಿಗಳ ಬದಲಾವಣೆ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಯುವಕರಿಗೆ, ಹೊಸ ನಾಯಕರಿಗೆ, ಮಹಿಳೆಯರಿಗೆ ಆದ್ಯತೆ ನೀಡುವ ಸಂಬಂಧ ಚರ್ಚೆ ನಡೆದು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.