ತುಮಕೂರು, ಜ.22- ಕಲಿಯುಗದ ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯವಾಗಿರುವುದರಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ಶಿವೈಕ್ಯರಾದ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಅವರು, ನಮ್ಮೆಲ್ಲರ ಆರಾಧ್ಯ ದೈವವಾಗಿದ್ದ ಸ್ವಾಮೀಜಿಯವರು ಜಗತ್ ಕಂಡ ಅಪರೂಪದ ಜ್ಞಾನ ಭಂಡಾರವಾಗಿದ್ದರು.ಸಿದ್ಧಗಂಗಾ ವಿದ್ಯಾಸಂಸ್ಥೆಯು ಶ್ರೀಗಳ ಸಾನಿಧ್ಯದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಆ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೂ ಬೆಳೆದಿದ್ದಾರೆ. ಕಾಯಕ ಯೋಗಿ ಶಿವಕುಮಾರ ಸ್ವಾಮೀಜಿ ಅವರು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಅವರ ಆದರ್ಶ ನಮ್ಮೊಡನೆ ಅಜರಾಮರವಾಗಿರುತ್ತದೆ. ಶ್ರೀಗಳು ಜನಿಸಿದ ಪುಣ್ಯ ಭೂಮಿಯಲ್ಲಿ ನಾವು ಜನಿಸಿರುವುದೇ ನಮ್ಮ ಅದೃಷ್ಟ. ಶ್ರೀಗಳು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವೆಲ್ಲ ಮುಂದೆ ಸಾಗಬೇಕಿದೆ.ಜಗತ್ತಿಗೆ ಶ್ರೀಗಳ ಆಶೀರ್ವಾದ ಸದಾ ಇದ್ದೇ ಇರುತ್ತದೆ ಎಂದು ಗೌಡರು ನುಡಿನಮನ ಸಲ್ಲಿಸಿದರು.
ನಾಡಿಗೆ ತುಂಬಲಾರದ ನಷ್ಟ:
ಭಕ್ತರ ಪಾಲಿನ ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳಾದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿಗಳು ಶಿವೈಕ್ಯರಾದ ಸುದ್ದಿ ತಿಳಿದು ಆಘಾತ ಉಂಟಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಲಕ್ಷಾಂತರ ಮಕ್ಕಳ ಬಾಳು ಬೆಳಗಿದ ಶ್ರೀಗಳ ಶಿಕ್ಷಣ, ಅನ್ನದಾಸೋಹದ ಕೈಂಕರ್ಯ ದೇಶ, ಭಾಷೆ, ಜಾತಿ, ಧರ್ಮಗಳ ಎಲ್ಲೆ ಮೀರಿ ಮಾದರಿಯಾಗುವಂತದ್ದು ಎಂದು ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.
ಇಡೀ ಮನುಕುಲಕ್ಕೆ ದಾರಿ ದೀಪವಾಗಿ ಯುಗಪುರುಷರಾಗಿದ್ದ ಶ್ರೀಗಳು ಶಿವೈಕ್ಯರಾಗಿರುವುದು ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳು ಲಿಂಗೈಕ್ಯರಾಗಿದ್ದು ದುಃಖ ಭರಿಸುವ ಶಕ್ತಿಯನ್ನು ಅಸಂಖ್ಯಾತ ಭಕ್ತರು, ವಿದ್ಯಾರ್ಥಿಗಳು ಹಾಗೂ ಮಠದ ಸಿಬ್ಬಂದಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.