ತುಮಕೂರು, ಜ.22-ಶತಮಾನದ ಶ್ರೇಷ್ಠ ಸಂತ, ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನ ಸಾಗರೋಪಾದಿಯಲ್ಲಿ ಶ್ರೀಮಠದತ್ತ ಹರಿದು ಬಂದಿತ್ತು.
ಲಿಂಗೈಕ್ಯರಾದ ಶ್ರೀಗಳ ಅಂತಿಮ ದರ್ಶನ ಪಡೆಯಲು ಆಗಮಿಸಿದ ಭಕ್ತರು ಭಾವೋದ್ವೇಗದಿಂದ ಉಮ್ಮಳಿಸುವುದು, ದುಃಖಿಸುವ ದೃಶ್ಯ ಹೃದಯ ಹಿಂಡುವಂತಿತ್ತು. ಭಕ್ತರ ಮತ್ತು ವಿದ್ಯಾರ್ಥಿಗಳ ದುಃಖ ಮುಗಿಲುಮುಟ್ಟಿತ್ತು.
ನಾಡಿನ ನಾನಾ ಮೂಲೆಗಳಲ್ಲದೆ, ದೇಶದ ಹಲವು ಕಡೆಗಳಿಂದ ಭಕ್ತಸಾಗರವೇ ಹರಿದುಬಂದಿತ್ತು.ಒಂದೆಡೆ ಶ್ರೀಗಳ ಗುಣಗಾನ ಮಾಡುತ್ತಿದ್ದರೆ, ಮತ್ತೊಂದೆಡೆ ಕಣ್ಣೀರ ಧಾರೆಯನ್ನು ಭಕ್ತರು ಹರಿಸುತ್ತಿದ್ದುದು ಮನಕಲಕುವಂತಿತ್ತು.
ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಸುಮಾರು 5 ಕಿಲೋ ಮೀಟರ್‍ಗಳವರೆಗೂ ಜನ ಸರದಿ ಸಾಲಿನಲ್ಲಿ ನಿಂತಿದ್ದರು.ಚಳಿ-ಬಿಸಿಲೆನ್ನದೆ ಭಕ್ತರು ದರ್ಶನ ಪಡೆದರು.
ನಾಡಿನ ಹಾಗೂ ದೇಶದ ಗಣ್ಯಾತಿಗಣ್ಯರು ಕೂಡ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದರು.ಅಂತಿಮ ದರ್ಶನದ ವ್ಯವಸ್ಥೆಯನ್ನು ಶಿಸ್ತುಬದ್ಧವಾಗಿ ಮಾಡಲಾಗಿತ್ತು.
ನಿನ್ನೆಯಿಂದ ಶ್ರೀಗಳ ಲಿಂಗೈಕ್ಯ ಕಾಯದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಗಲು-ರಾತ್ರಿ ಪೂರ್ತಿ ಜನ ಬಿಡುವಿಲ್ಲದಂತೆ ಮಠದತ್ತ ಆಗಮಿಸಿ ಅಂತಿಮ ದರ್ಶನ ಪಡೆದರು.
ಮುಂಜಾಗ್ರತಾ ಕ್ರಮವಾಗಿ ತುಮಕೂರಿನೊಳಗೆ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಸಾರ್ವಜನಿಕರಿಗಾಗಿ ಸ್ಥಳಾವಕಾಶ ಕಲ್ಪಿಸಲಾಗಿದೆ.ಆದರೆ ರಾಜ್ಯದ ಮೂಲೆ ಮೂಲೆಗಳಿಂದಷ್ಟೇ ಅಲ್ಲದೆ, ದೇಶದ ವಿವಿಧೆಡೆಗಳಿಂದಲೂ ಜನಸಾಗರ ಹರಿದು ಬರುತ್ತಿರುವುದರಿಂದ ಸ್ಥಳಾವಕಾಶದ ಅಭಾವ ಎದ್ದು ಕಾಣುತ್ತಿದೆ.
ಬ್ಯಾರಿಕೇಡ್‍ಗಳನ್ನು ನಿರ್ಮಿಸಿ ಅತ್ಯಂತ ವ್ಯವಸ್ಥಿತವಾಗಿ ಸರದಿ ಸಾಲಿನಲ್ಲಿ ಜನ ಸಾಗಲು ಪೊಲೀಸರು ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೂ ವಜ್ರಮಹೋತ್ಸವ ಕಟ್ಟಡದ ಮುಂಭಾಗದಲ್ಲಿನ ಮೈದಾನದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಹಿಂದೆಂದೂ ಕಾಣದಷ್ಟು ಜನಸ್ತೋಮ ಶ್ರೀಗಳ ಅಂತಿಮ ದರ್ಶನಕ್ಕಾಗಿ ಆಗಮಿಸಿತ್ತು.
ಬೆಂಗಳೂರಿನ ಯಶವಂತಪುರದಿಂದ 4 ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಕೆಎಸ್‍ಆರ್‍ಟಿಸಿ ಕೂಡ ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು.
ರಾಜ್ಯದ ವಿವಿಧ ಮೂಲೆಗಳಿಂದ ಜನ ಆಗಮಿಸಲು ಕೆಲವು ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ತುಮಕೂರು ಜಿಲ್ಲೆಯ ಹಳ್ಳಿ ಹಳ್ಳಿಗೂ ಸಾರಿಗೆ, ಖಾಸಗಿ ಬಸ್‍ಗಳು ಸಂಚರಿಸಿದ್ದು, ಜನರ ಆಗಮನಕ್ಕೆ ಅನುಕೂಲ ಕಲ್ಪಿಸಲಾಗಿತ್ತು.
ಇಷ್ಟೇ ಅಲ್ಲದೆ, ಕೆಲವು ಖಾಸಗಿ ವಾಹನಗಳ ಮಾಲೀಕರು ಕೂಡ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಿದ್ದರು. ಅಂತಿಮ ದರ್ಶನಕ್ಕಾಗಿ ಆಗಮಿಸಿದ ಭಕ್ತರಿಗೆ ಬಹಳಷ್ಟು ಹೊಟೇಲ್‍ಗಳು ಉಚಿತ ಊಟ, ತಿಂಡಿ ವ್ಯವಸ್ಥೆ ಮಾಡಿದ್ದವು. ಅಲ್ಲಲ್ಲಿ ಸಾರ್ವಜನಿಕರೇ ಖುದ್ದಾಗಿ ಭಕ್ತರಿಗೆ ಕುಡಿಯುವ, ನೀರು, ಮಜ್ಜಿಗೆ, ಪಾನಕದ ವ್ಯವಸ್ಥೆ ಕಲ್ಪಿಸಿ ದಣಿವಾರಿಸುವ ಪ್ರಯತ್ನ ನಡೆಸಿದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.