ಶ್ರೀಗಳಿಗೆ ಭಾರತ ರತ್ನ ಸಲ್ಲದೆಯಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಕ್ತರು

ತುಮಕೂರು, ಜ.22-ತಮ್ಮ ಆರಾಧ್ಯ ದೈವದ ಅಗಲಿಕೆಯ ದುಃಖದ ನಡುವೆಯೂ ಶ್ರೀಗಳಿಗೆ ಅನುರೂಪವಾಗಿದ್ದ ಭಾರತರತ್ನ ಸಲ್ಲದೆ ಇರುವ ಬಗ್ಗೆ ಭಕ್ತರ ಕನವರಿಕೆ ಹೆಚ್ಚಾಗಿತ್ತು.

ಶ್ರೀಗಳ ಅಂತಿಮ ದರ್ಶನಕ್ಕಾಗಿ ಸಾಲುಗಟ್ಟಿ ಬರುತ್ತಿದ್ದ ಭಕ್ತರು ಭಾರತರತ್ನಕ್ಕಾಗಿ ಘೋಷಣೆ ಕೂಗುತ್ತಿದ್ದರು. ಅನ್ನ, ವಿದ್ಯೆ, ಜ್ಞಾನ ದಾಸೋಹದ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದ ಸಿದ್ದಗಂಗಾ ಶ್ರೀಗಳು ಒಂದು ಸರ್ಕಾರ ಮಾಡಬಹುದಾದಷ್ಟು ಸಾಧನೆಯನ್ನು ತಮ್ಮ ಆಯುಷ್ಯದ ಅವಧಿಯಲ್ಲಿ ಸಾಧಿಸಿ ತೋರಿಸಿದ್ದರು.

ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹದ ಮೂಲಕ ಬದುಕು ಕಟ್ಟಿಕೊಟ್ಟಿದ್ದರು. ಶ್ರೀಗಳ ತ್ರಿವಿಧ ದಾಸೋಹ ಜಗತ್‍ವಿಖ್ಯಾತವಾಗಿದ್ದು, ಅಮೆರಿಕಾ ಅಧ್ಯಕ್ಷರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

ರಾಷ್ಟ್ರದ ಎಲ್ಲಾ ಸರ್ಕಾರಗಳಲ್ಲೂ ಪ್ರಧಾನಿಯಾಗಿದ್ದವರು ಶ್ರೀಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ಮಠಕ್ಕೆ ಭೇಟಿ ನೀಡಿ ಇಲ್ಲಿನ ಸೇವಾಕೈಂಕರ್ಯವನ್ನು ಕಣ್ಣಾರೆ ಕಂಡಿದ್ದಾರೆ. ಇಂದಿರಾಗಾಂದಿಯಿಂದ ಹಿಡಿದು ಈಗಿನ ನರೇಂದ್ರ ಮೋದಿಯವರೆಗೂ ಪ್ರತಿಯೊಬ್ಬ ಪ್ರಧಾನಿಯು ಶ್ರೀಮಠಕ್ಕೆ ಭೇಟಿ ನೀಡಿದ್ದಾರೆ.ಅದೇ ರೀತಿ ಎಲ್ಲಾ ರಾಷ್ಟ್ರಪತಿಗಳು ಶ್ರೀಮಠಕ್ಕೆ ಭೇಟಿ ನೀಡಿದ್ದಾರೆ.

ಅವರ್ಣನೀಯವಾದ ಸೇವಾ ಕೈಂಕರ್ಯ ಕಣ್ಣಾರೆ ಕಂಡ ನಂತರವೂ ಶ್ರೀಗಳಿಗೆ ಈವರೆಗೂ ಭಾರತರತ್ನ ಘೋಷಣೆಯಾಗದಿರುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ