ಬೆಂಗಳೂರು, ಜ.21-ಕಲಿಯುಗದ ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಅಗಲಿಕೆಯಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂತಾಪ ಸೂಚಿಸಿದ್ದಾರೆ.
ನಮ್ಮೆಲ್ಲರ ಆರಾಧ್ಯ ದೈವ ಶ್ರೀ ಶಿವಕುಮಾರಸ್ವಾಮೀಜಿಯವರು ಈ ಜಗತ್ತು ಕಂಡ ಜ್ಞಾನ ಭಂಡಾರ. ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರೂ ಆದ ಶ್ರೀಗಳ ಸಾನಿಧ್ಯದಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. ಸ್ವಾಮೀಜಿಯವರು ಈ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ.ಅವರ ಆದರ್ಶ ನಮ್ಮೊಡನೆ ಅಜರಾಮರವಾಗಿರುತ್ತದೆ ಎಂದು ತಿಳಿಸಿದರು.
ಶ್ರೀಗಳು ಜನಿಸಿದ ಪುಣ್ಯಭೂಮಿಯಲ್ಲಿ ನಾವೆಲ್ಲ ಜನಿಸಿರುವುದು ನಮ್ಮ ಅದೃಷ್ಟ.ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವೆಲ್ಲ ಮುಂದೆ ಸಾಗಬೇಕಾಗಿದೆ ಎಂದು ಹೇಳಿದರು.