ಬೆಂಗಳೂರು,ಜ.21- ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ನಿಧನ ಹಿನ್ನಲೆ ಬಿಜೆಪಿಯ ಬರ ಅಧ್ಯಯನ ಪ್ರವಾಸವನ್ನು ಮುಂದೂಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರ ಏಳು ಸದಸ್ಯರ ತಂಡ ನಾಲ್ಕು ಬರಗಾಲಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಬೇಕಿತ್ತು.
ಬೆಳಗ್ಗೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಂಡ ಬರಗಾಲ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸಕ್ಕೆ ತೆರಳಬೇಕಿತ್ತು.
ಸರ್ಕಾರ ಕೈಗೊಂಡಿರುವ ಬರ ಜಿಲ್ಲೆಗಳಿಗೆ ಪರಿಹಾರಗಳ ಬಗ್ಗೆ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯಲು ಬಿಜೆಪಿ ಮುಂದಾಗಿತ್ತು.
ನಾಳೆ ಮಂಗಳವಾರ ಯಡಿಯೂರಪ್ಪನವರು ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಬರಪರಿಸ್ಥಿತಿ ಕುರಿತು ಅಧ್ಯಯನ ನಡೆಸಬೇಕಿತ್ತು.
ಈ ತಂಡದಲ್ಲಿ ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್, ಮಾಜಿ ಸಚಿವರಾದ ಬಿ ಎನ್ ಬಚ್ಚೇಗೌಡ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಪಕ್ಷದ ಹಿರಿಯ ಕಾರ್ಯಕಾರಿ ಜಯದೇವ್, ಮರಿಸ್ವಾಮಿ ಮತ್ತು ವೆಂಕಟಮುನಿಯಪ್ಪ ಮತ್ತು ಇತರ ಸದಸ್ಯರು ಇದಾರೆ.