ವಿಶ್ವ ಬ್ಯಾಂಕ್ ನಿಂದ ನೂತನವಾಗಿ ರೂಪಿಸಿರುವ ಪಿಡಿಎನ್ಎ

ಬೆಂಗಳೂರು,ಜ.21-ವಿಪತ್ತಿನ ಸಂದರ್ಭದಲ್ಲಿ ಎದುರಾಗುವ ನಷ್ಟದ ಅಂದಾಜು ಮಾಡಲು ವಿಶ್ವ ಬ್ಯಾಂಕ್ ನೂತನವಾಗಿ ರೂಪಿಸಿರುವ ಪಿಡಿಎನ್‍ಎ(ವಿಪತ್ತು ನಂತರದ ನಷ್ಟದ ಅಂದಾಜು) ಮೂಲಕ ವೈಜ್ಞಾನಿಕವಾಗಿ ಲೆಕ್ಕ ಹಾಕಲು ಸಾಧ್ಯವಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅನಿಲ್‍ಕುಮಾರ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ವಿಪತ್ತು ನಂತರ ಮೌಲ್ಯಮಾಪನ ಅಗತ್ಯತೆ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇದುವರೆಗೂ ವಿಪತ್ತಿನ ಸಂದರ್ಭದಲ್ಲಿ ಉಂಟಾದ ಅಂದಾಜು ಹಾಗೂ ಪರಿಹಾರ ಪಾವತಿಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತಿರಲಿಲ್ಲ. ಇದರಿಂದ ಸೂಕ್ತ ಪರಿಹಾರವೂ ದೊರೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಭೂಕಂಪ, ನೆರೆ, ಬರ, ಭೂಕುಸಿತ, ಸುನಾಮಿ, ಬೆಂಕಿ ಅನಾಹುತದಂತಹ ವಿಪತ್ತಿನ ಸಂದರ್ಭಗಳಲ್ಲಿ ನಷ್ಟದ ಅಂದಾಜನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಲು ಸಾಧ್ಯವಾಗದೆ ಒಂದು ರಸ್ತೆ ಕೊಚ್ಚಿ ಹೋದರೆ ಆ ರಸ್ತೆ ನಿರ್ಮಾಣದ ಖರ್ಚನ್ನು ಆಧರಿಸಿ ವರದಿ ಸಿದ್ಧಪಡಿಸಿ ಪರಿಹಾರ ಕೋರಲಾಗುತ್ತಿತ್ತು.

ಇದರಿಂದ ಜಿಲ್ಲಾ ಮಟ್ಟದಲ್ಲಿ 10 ಕೋಟಿ ನಷ್ಟದ ಅಂದಾಜನ್ನು ಸಲ್ಲಿಸಿದರೆ ರಾಜ್ಯ ಸರ್ಕಾರ 1ರಿಂದ 2 ಕೋಟಿ ರೂ.ಗಳನ್ನು ಮಾತ್ರ ನೀಡುತ್ತಿತ್ತು. ಅದೇ ರೀತಿ ವಿಪತ್ತಿನ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಒಂದು ಸಾವಿರ ಕೋಟಿ ಪರಿಹಾರಕ್ಕಾಗಿ ಮನವಿ ಮಾಡಿದರೆ ಕೇಂದ್ರದಿಂದ ಕೇವಲ 250 ಕೋಟಿ ರೂ.ಒದಗಿಸಲಾಗುತ್ತಿತ್ತು.

ಜೊತೆಗೆ ಯಾವ ಮಾನದಂಡದಲ್ಲಿ ವಿಪತ್ತಿನ ಅಂದಾಜು ಮಾಡಲಾಗಿದೆ ಎಂದು ಪ್ರಶ್ನಿಸಲಾಗುತ್ತಿತ್ತು. ಒಟ್ಟಾರೆ ಕರಾರುವಕ್ಕಾದ ಅಂದಾಜು ಸಿಗುತ್ತಿರಲಿಲ್ಲ. ಇದೆಲ್ಲದಕ್ಕೂ ಪರಿಹಾರವಾಗಿ ಪಿಡಿಎನ್‍ಎ ಮೂಲಕ ವೈಜ್ಞಾನಿಕವಾಗಿ ಅಂದಾಜು ಮಾಡಿ ಪರಿಹಾರ ಪಡೆದುಕೊಳ್ಳಲು ಸಾಧ್ಯವಿದೆ.

ಈ ಯೋಜನೆಯಡಿ ಒಂದು ರಸ್ತೆ ನೆರೆಯಿಂದ ಹಾಳಾದರೆ ಎಷ್ಟು ಉದ್ದದ ರಸ್ತೆ ಹಾಳಾಗಿದೆ, ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಎದುರಾಗುವ ಪರಿಣಾಮ, ರಸ್ತೆಯಿಂದ ಬರುವ ಆದಾಯ ಪ್ರಮಾಣ ಎಲ್ಲವನ್ನು ಕರಾರುವಕ್ಕಾಗಿ ಅಂದಾಜು ಮಾಡಲು ಸಾಧ್ಯವಿದೆ.

ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ನೆರೆ ಹಾವಳಿಯಲ್ಲಿ 28000 ಕೋಟಿ ಪರಿಹಾರಕ್ಕಾಗಿ ವರದಿ ಸಲ್ಲಿಸಲಾಗಿದೆ. ಪಿಡಿಎನ್‍ಎ ಆಧರಿಸಿ ವಿಪತ್ತು ಪರಿಹಾರ ಅಂದಾಜನ್ನು ಮಾಡಬೇಕೆಂಬ ಆಲೋಚನೆಯನ್ನು ಮೊದಲಿಗೆ ಕರ್ನಾಟಕ ಕೈಗೊಂಡಿರುವುದು ಸ್ವಾಗತಾರ್ಹ ಎಂದರು.

ಈ ಮೊದಲು ಬರ ಪರಿಹಾರದಲ್ಲಿ ಒಂದು ಹೆಕ್ಟೇರ್‍ಗೆ 500 ರೂ.ನೀಡುವುದು ವೈಜ್ಞಾನಿಕವಾಗಿ ಸಮಾಧಾನಕರವಲ್ಲ. ಪಿಡಿಎನ್‍ಎ ಪದ್ದತಿಯಡಿ ಪರಿಹಾರ ಮಾತ್ರವಲ್ಲದೆ ಪುನರ್ ನಿರ್ಮಾಣವನ್ನು ಆಧರಿಸಿ ಹಣ ಒದಗಿಸುವ ವ್ಯವಸ್ಥೆ ಇರುವುದು ಹೆಚ್ಚು ಉಪಯುಕ್ತವಾಗಿದೆ.ಅಂದರೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಗಿರುವ ಅಂದಾಜನ್ನು ಅನುಸರಿಸಿ ಅದನ್ನು ಭರಿಸಲು ಪ್ರಯತ್ನಿಸುವುದೇ ವೈಜ್ಞಾನಿಕ ಮಾದರಿ.

ಭಾರತ ಅತ್ಯಂತ ಸೂಕ್ಷ್ಮಪ್ರದೇಶವಾಗಿದ್ದು, ಈವರೆಗೂ ಸಾಕಷ್ಟು ವಿಪತ್ತುಗಳನ್ನು ಎದುರಿಸಿದೆ. ಆದರೂ ದೊಡ್ಡ ಪ್ರಮಾಣದಲ್ಲಿ ವಿಪತ್ತು ಎದುರಿಸಿಲ್ಲ. ಸುನಾಮಿಯಂತಹ ವಿಪತ್ತನ್ನು ಇತ್ತೀಚೆಗೆ ಎದುರಿಸಿದೆ. ಅಲ್ಲಿಯವರೆಗೂ ಸುನಾಮಿ ಬಗ್ಗೆ ಗೊತ್ತೇ ಇರಲಿಲ್ಲ ಎಂದು ನುಡಿದರು.

ಪ್ರಕೃತಿ ವಿಕೋಪಗಳಿಂದ ಉಂಟಾಗುವ ಆರ್ಥಿಕ, ಸಾಮಾಜಿಕ, ಭೌಗೋಳಿಕ ನಷ್ಟದ ಬಗ್ಗೆ ವೈಜ್ಞಾನಿಕವಾಗಿ ಅಂದಾಜು ಮಾಡಿ ಸೂಕ್ತ ವರದಿ ತಯಾರಿಸುವ ಪಿಡಿಎನ್‍ಎ ವ್ಯವಸ್ಥೆ ಸೂಕ್ತ ಮಾಹಿತಿಯನ್ನು ಒದಗಿಸುತ್ತದೆ ಎಂದು ತಿಳಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಪೆÇ್ರ.ಸಂತೋಷ್‍ಕುಮಾರ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಡಾ.ಜಿ.ವಿಶ್ವನಾಥ್, ಶೇಖರ್,ಚತುರ್ವೇದಿ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ