ಕಾಯಕಯೋಗಿ, ನಡೆದಾಡುವ ದೇವರ ಜೀವನದ ಪ್ರಮುಖ ಘಟನಾವಳಿ…

ತುಮಕೂರು: ನಡೆದಾಡುವ ದೇವರು, ಕಾಯಕ ಯೋಗಿ ಸಿದ್ಧಗಂಗಾ ಡಾ.ಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಇಂದು ಲಿಂಗೈಕ್ಯರಾಗಿದ್ದಾರೆ. ಶತಾಯುಷಿ ಶ್ರೀಗಳು 111 ವರುಷಗಳನ್ನು ಪೂರೈಸಿದ್ದು, ಅವರ ಬದುಕಿನ ಪ್ರಮುಖ ಘಟನಾವಳಿಗಳ ಹಿನ್ನೋಟ ಇಲ್ಲಿದೆ…

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಈಗಿನ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರ ಸಿದ್ಧಗಂಗೆಯ ಮಹಾಯೋಗಿ ಶಿವಕುಮಾರ ಸ್ವಾಮೀಜಿ ಹುಟ್ಟೂರು. ಶಿವಗಂಗೆಯ ಬೆಟ್ಟದ ತಪ್ಪಲಿನಲ್ಲಿರುವ ಈ ಹಳ್ಳಿಗೆ ನಾಡಿನ ಭೂಪಟದಲ್ಲಿ ವಿಶೇಷ ಸ್ಥಾನಮಾನವಿದೆ. ವೀರಾಪುರದ ಹೊನ್ನಪ್ಪ, ಗಂಗಮ್ಮ ದಂಪತಿಯ 13 ಮಕ್ಕಳಲ್ಲಿ ಒಬ್ಬರಾದ ಶಿವಣ್ಣ ಏಪ್ರಿಲ್ 1, 1908ರಲ್ಲಿ ಜನ್ಮತಳೆದರು. ವೀರಾಪುರ, ಪಾಲನಹಳ್ಳಿಯಲ್ಲಿ ಬಾಲ್ಯ ಕಳೆದ ನಂತರ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ. 1919ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆ, 1921ರಲ್ಲಿ  ಇಂಗ್ಲೀಷ್ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.

ಅಣ್ಣ ಲಿಂಗಪ್ಪನ ಜತೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತುಮಕೂರಿನ ಸರ್ಕಾರಿ ಹೈಸ್ಕೂಲ್ (ಸರ್ಕಾರಿ ಜೂನಿಯರ್ ಕಾಲೇಜು) ಸೇರ್ಪಡೆಯಾದ ಶಿವಣ್ಣ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಈ ಸಂದರ್ಭದಲ್ಲಿ  ಪ್ಲೇಗ್ ರೋಗ ಕಾಣಿಸಿಕೊಂಡು ಊರಿಗೆ ಹಿಂದಿರುಗುವಂತಾಯಿತು. ಅಣ್ಣ ಲಿಂಗಪ್ಪ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಊರು ಸೇರಿದರು. ಆಗ ಊಟ, ವಸತಿಗಾಗಿ ಶ್ರೀಮಠದ ಆಶ್ರಯ ಬಯಸಬೇಕಾಯಿತು.

ಉದ್ಧಾನ ಶಿವಯೋಗಿಗಳ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಮರುಳಾರಾಧ್ಯ ಶ್ರೀಗಳ ಕಣ್ಣಿಗೆ ಆಗ ಶಿವಣ್ಣ ಬೀಳುತ್ತಾರೆ. 1927ರಲ್ಲಿ ಮೆಟ್ರಿಕ್ಯುಲೇಶನ್ ನಂತರ ಬಿ.ಎ., ಆನರ್ಸ್ ವ್ಯಾಸಂಗಕ್ಕೆ ಬೆಂಗಳೂರಿಗೆ ತೆರಳುತ್ತಾರೆ. ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರ, ಗಣಿತ ಐಚ್ಛಿಕ ವಿಷಯವನ್ನು ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ 1930 ಜನವರಿ 16 ರಂದು ಮರುಳಾಧ್ಯರ ಲಿಂಗೈಕ್ಯ ಸುದ್ದಿ  ಶ್ರೀಮಠದಿಂದ ಬಂದಿತ್ತು. ಅಂದು ಮರುಳಾಧ್ಯಕ್ಷರ  ಅಂತಿಮ ದರ್ಶನ ಪಡೆಯಲು ಶ್ರೀಕ್ಷೇತ್ರಕ್ಕೆ  ಬಂದಿದ್ದ ಶಿವಣ್ಣ ಅಚಾನಕ್ ಆಗಿ ಹಿರಿಯ ಶ್ರೀಗಳಾದ ಉದ್ದಾನಶಿವಯೋಗಿಗಳ ಕಣ್ಣಿಗೆ ಬೀಳುತ್ತಾರೆ. ಬಳಿಕ 1930, ಮಾ.3ರಂದು ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಶಿವಣ್ಣರನ್ನು ಆಯ್ಕೆ ಮಾಡಲಾಗುತ್ತದೆ. ಸನ್ಯಾಸ ದೀಕ್ಷೆ ಪಡೆದ ಶಿವಣ್ಣ  ಶಿವಕುಮಾರ ಸ್ವಾಮಿಗಳಾಗುತ್ತಾರೆ.

ಸಿದ್ಧಪುರುಷನ ಹೆಜ್ಜೆ ಗುರುತು:

1908: ಬೆಂಗಳೂರು ಗ್ರಾಮಾಂತರ ಜಿಲ್ಲೆ ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಹೊನ್ನಪ್ಪ , ಗಂಗಮ್ಮ ದಂಪತಿ ಪುತ್ರರತ್ನರಾಗಿ ಏ.1 ರಂದು ಜನಿಸಿದ ಸಿದ್ಧಗಂಗಾ ಶ್ರೀ.

1913-27: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ, ನಾಗವಲ್ಲಿಯಲ್ಲಿ ಮಾಧ್ಯಮಿಕ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಮೆಟ್ರಿಕ್ಯೂಲೇಷನ್ ತೇರ್ಗಡೆಯಾದರು.

1927-30: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ. ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಆನರ್ಸ್ ವಿದ್ಯಾಭ್ಯಾಸ.

1930:  ಮಾ.3ರಂದು ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ.

1941: ಜ.11ರಂದು ಶ್ರೀಉದ್ಧಾನ ಶಿವಯೋಗಿ ಸ್ವಾಮೀಜಿ ಲಿಂಗೈಕ್ಯರಾದಾಗ ಮಠಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ.

1949: ಜೂ.18ರಂದು ಶ್ರೀಸಿದ್ಧಲಿಂಗೇಶ್ವರರ ಸಂಸ್ಕೃತ ಮತ್ತು ವೇದಪಾಠಶಾಲೆ ರಜತೋತ್ಸವ.

1950: ಧರ್ಮಸ್ಥಳದ ಶ್ರೀಮಂಜಯ್ಯ ಹೆಗ್ಗಡೆಯವರಿಂದ ಮಹಾ ನಡಾವಳಿ ಉತ್ಸವದಲ್ಲಿ ಗೌರವ ಸ್ವೀಕಾರ.

1956: ಶ್ರೀಕ್ಷೇತ್ರದಲ್ಲಿ ಸಂಸ್ಕೃತ ಕಾಲೇಜು ಕಟ್ಟಡ ನಿರ್ಮಾಣ.

1960: ಶ್ರೀಮಠದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ನಿರ್ಮಾಣ ಆರಂಭ.

1962: ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪನೆ.

1963: ಜಾತ್ರೆಯಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಆರಂಭ ಹಾಗೂ ಸಿದ್ಧಗಂಗಾ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ.

1965: ನ.6 ಕರ್ನಾಟಕ ವಿವಿಯಿಂದ ಗೌರವ ಡಿ.ಲಿಟ್ ಸ್ವೀಕಾರ.

1970: ಡಿ.27ರಂದು ಬೆಂಗಳೂರಿನಲ್ಲಿ ನಡೆದ 47ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ

1972: ಮೇ 26 ಶ್ರೀಮಠದ ಪೀಠಾಧಿಕಾರ ಸ್ವೀಕಾರದ ರಜತ ಮಹೋತ್ಸವ

ಮೇ.28 ಉಚಿತ ವಿದ್ಯಾರ್ಥಿ ನಿಲಯ ಮತ್ತು ಸಂಸ್ಕೃತ ಕಾಲೇಜಿನ ಸುವರ್ಣ ಮಹೋತ್ಸವ

1982: ಏ.24 ರಾಷ್ಟ್ರಪತಿ ನೀಲಂ ಸಜೀವರೆಡ್ಡಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಎಸ್.ಗುಂಡೂರಾವ್ ಅವರಿಂದ ಸುವರ್ಣಮಹೋತ್ಸವ ನೆನಪಿಗಾಗಿ ಗೌರವ ಗ್ರಂಥ ‘ಸಿದ್ಧಗಂಗಾಶ್ರೀ’ ಬಿಡುಗಡೆ. ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜು ಸ್ಥಾಪನೆ.

1984: ನೆಲಮಂಗಲದಲ್ಲಿ ಶ್ರೀ ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ. ಶ್ರೀಸಿದ್ಧಗಂಗಾ ಫಾರ್ಮಸಿ ಕಾಲೇಜು ಸ್ಥಾಪನೆ

1987: ಏ.20 ಹುಬ್ಬಳ್ಳಿ 3 ಸಾವಿರ ಮಠದ ಜಗದ್ಗುರು ಗಂಗಾಧರರಾಜ ಯೋಗೀಂದ್ರ ಸ್ವಾಮೀಜಿ ರಜತ ಮಹೋತ್ಸವದ ಅಧ್ಯಕ್ಷತೆ.

1988: ಮಾ.30 ಉತ್ತರಾಧಿಕಾರಿಯಾಗಿ ಸಿದ್ಧಲಿಂಗಸ್ವಾಮೀಜಿ ನೇಮಕ.

1992: ಫೆ.16 ಶ್ರೀಗಳ ವಜ್ರಮಹೋತ್ಸವ ಸ್ಮಾರಕ ಕಟ್ಟಡಗಳ ಶಿಲಾನ್ಯಾಸ ಅಂದಿನ ಉಪರಾಷ್ಟ್ರಪತಿ ಡಾ.ಶಂಕರ್​ ದಯಾಳ್ ಶರ್ಮ ಅವರಿಂದ ಸಿದ್ಧಗಂಗಾ ನರ್ಸಿಂಗ್ ಕಾಲೇಜು ಸ್ಥಾಪನೆ.

1995: ಫೆ.2 ಸಿದ್ಧಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ.

1997: ಮಾ.22 ಶ್ರೀಗಳ ವಜ್ರಮಹೋತ್ಸವ ಬೃಹತ್ ವಿದ್ಯಾರ್ಥಿನಿಲಯ, ಪ್ರಸಾದ ನಿಲಯ ಹಾಗೂ ದಾಸೋಹ ಸಿರಿಗ್ರಂಥ ಸಮರ್ಪಣೆ.

2000: ಜ.30 ಪ್ರಧಾನಿ ವಾಜಪೇಯಿ ಅವರಿಂದ ಸಂಸ್ಕೃತ ಕಾಲೇಜು, ಅಮೃತ ಮಹೋತ್ಸವ ಉದ್ಘಾಟನೆ. ಅಂಧ ಮಕ್ಕಳಿಗೆ ನೂತನ ಶಾಲಾ ಕಟ್ಟಡ ಹಾಗೂ ವಸತಿ ನಿಲಯ ನಿರ್ಮಾಣ.

2005: ಏ.24 ಶ್ರೀಗಳ 98ನೇ ಜನ್ಮದಿನೋತ್ಸವ ಸಮಾರಂಭ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಭಾಗಿ.

ಏ.25 75ನೇ ಪೀಠಾರೋಹಣದ (ಅಮೃತ ಮಹೋತ್ಸವ) ಸಮಾರಂಭ ಗೃಹಸಚಿವ ಶಿವರಾಜ್ ಪಾಟೀಲ್, ಸಿಎಂ ಧರಂಸಿಂಗ್ ಭಾಗಿ.

2006: ಏ.7 ಶ್ರೀಗಳ ಗುರುವಂದನಾ ಕಾರ್ಯಕ್ರಮ ರಾಷ್ಟ್ರಪತಿ ಎಪಿಜೆ ಅಬ್ದುಲ್‍ಕಲಾಂ, ರಾಜ್ಯಪಾಲ ಚತುರ್ವೇದಿ, ಸಿಎಂ ಕುಮಾರಸ್ವಾಮಿ, ಡಿಸಿಎಂ ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧ್ಯಕ್ಷರು ಭಾಗವಹಿಸಿದ್ದರು.

2007: ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ. ಸಿದ್ಧಗಂಗಾ ಶ್ರೀಗಳ ಜನ್ಮಶತಮಾನೋತ್ಸವ ಸಮಾರಂಭ

2012: ಗುರುವಂದನಾ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭಾಗಿ.

2013: ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ.

2014: ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ

2015: ಏ.1ಕ್ಕೆ 108ನೇ ವರ್ಷಕ್ಕೆ ಶ್ರೀಗಳ ಪಾದಾರ್ಪಣೆ

2015: ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಗೆ ಸಿದ್ಧಗಂಗಾ ಶ್ರೀಗಳು ಭಾಜನ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ