ಬೀದಿ ದೀಪ ಮತ್ತು ಮಳಿಗೆಗಳನ್ನು ಲೋಕಾರ್ಪಣೆಗೊಳಿಸಿದ ಶಾಸಕ ಎಸ್.ಟಿ.ಸೋಮಶೇಖರ್

ಯಶವಂತಪುರ, ಜ.20- ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಸೂಲಿಕೆರೆ ಗ್ರಾಮ ಪಂಚಾಯತಿ ಸಾರ್ವಜನಿಕ ಕೆಲಸಗಳಿಗೆ ಅನುದಾನ ಬಳಕೆ ಮಾಡಿರುವುದು ಶ್ಲಾಘನೀಯ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸೂಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಮ್ಮಘಟ್ಟ ಗ್ರಾಮದಲ್ಲಿ ಪ್ರಯಾಣಿಕ ತಂಗುದಾಣ, ಎತ್ತರದ ಪ್ರಖರ ಬೆಳಕಿನ ಬೀದಿ ದೀಪ ಹಾಗೂ ಅಂಗಡಿ ಮಳಿಗೆಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣ ನಿರ್ಮಾಣ, ಸಾರ್ವಜನಿಕರ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಅಹಿತಕರ ಘಟನೆಗಳನ್ನು ತಡೆಗಟ್ಟಲು ಐಮಾಸ್ ಬೀದಿ ದೀಪ ಸಹಕಾರಿಯಾಗುತ್ತದೆ ಎಂದರು.

ಸೂಲಿಕೆರೆ ಗ್ರಾಪಂ ಅಧ್ಯಕ್ಷ ಮಾರೇಗೌಡ ಮಾತನಾಡಿ, ಪಂಚಾಯತಿಗೆ ನಿರ್ದಿಷ್ಟ ಆದಾಯ ಮೂಲವಿದ್ದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ ಎಂಬುದನ್ನು ಮನಗಂಡು ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಸದಸ್ಯೆ ಲತಾ ಹನುಮಂತೇಗೌಡ, ತಾಪಂ ಸದಸ್ಯೆ ಶೋಭಾ ತಿಮ್ಮೇಗೌಡ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸೋಮೇಶ್ ಕುಮಾರ್, ಸ್ಥಳೀಯ ಗ್ರಾಪಂ ಸದಸ್ಯರು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ