ಬೆಂಗಳೂರು, ಜ.20- ಹಾವು-ಏಣಿ ಆಟಕ್ಕೆ ಸಾಕ್ಷಿಯಾದ ರಾಜ್ಯ ರಾಜಕಾರಣದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಹರಿಯಾಣದ ಗುರುಗ್ರಾಮದ ಭವ್ಯ ಖಾಸಗಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ಇಂದು ರಾಜಕ್ಕೆ ಹಿಂದಿರುಗಿದ್ದಾರೆ.
ಪಕ್ಷದ ಎಲ್ಲಾ 104 ಶಾಸಕರು ತಡರಾತ್ರಿಯೊಳಗೆ ರಾಜ್ಯಕ್ಕೆ ಹಿಂದಿರುಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಹಿಂದಿರುಗಿದ್ದಾರೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಲೇಹರ್‍ಸಿಂಗ್ ತಿಳಿಸಿದ್ದಾರೆ.
ರಾಜ್ಯಕ್ಕೆ ಹಿಂದಿರುಗಿದ ಶಾಸಕರಲ್ಲಿ ಕೆಲವರು ನೇರವಾಗಿ ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿದರೆ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪ ಅವರು ಬೆಂಗಳೂರಿನ ತಮ್ಮ ತಮ್ಮ ಸ್ಥಳಗಳಿಗೆ ತೆರಳಿದರು.
ಕಳೆದ ಕೆಲವು ದಿನಗಳಿಂದ ಆಪರೇಷನ್ ಕಮಲ ಮತ್ತು ಆನಂತರದ ಬೆಳವಣಿಗೆ ಹಿನ್ನೆಲೆಯಲ್ಲಿ ಶಾಸಕರು ರೆಸಾರ್ಟ್ ವಾಸ್ತವ್ಯ ಹೂಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿರುವ ಆಡಳಿತಾರೂಢ ಮೈತ್ರಿ ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸುವುದಿಲ್ಲ ಎಂದು ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್‍ನಲ್ಲಿ ಭಿನ್ನಾಭಿಪ್ರಾಯ ತೀವ್ರಗೊಂಡಿದ್ದು, ಅದು ಮಿತ್ರ ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರಲಿದೆ.ಸದ್ಯದಲ್ಲೇ ಅಸಮಾಧಾನದ ಜ್ವಾಲಾಮುಖಿ ಆಸ್ಪೋಟಗೊಳ್ಳಲಿದೆ ಎಂದು ನಿನ್ನೆಯಷ್ಟೇ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದರು.