ಬೆಂಗಳೂರು: ಬಿಜೆಪಿ ರೆಸಾರ್ಟ್ ರಾಜಕರಣ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಕೂಡ ತಮ್ಮ ಶಾಸಕರನ್ನು ರೆಸಾರ್ಟ್ಗೆ ಕಳುಹಿಸಿರುವ ಕ್ರಮಕ್ಕೆ ಟೀಕೆಗಳು ವ್ಯಕ್ತವಾಗುತ್ತಿದ್ದರೂ ಕೈ ನಾಯಕರು ಮಾತ್ರ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಸಂಸದ ಡಿಕೆ ಶಿವಕುಮಾರ್ ಇದು ಮುಯ್ಯಿಗೆ ಮುಯ್ಯಿ ತೀರಿಸುವ ಕ್ರಮ ಎಂದು ವ್ಯಾಖ್ಯಾನಿಸಿದ್ದಾರೆ.
ಇತ್ತೀಚಿನ ದಿನದಲ್ಲಿ ರೆಸಾರ್ಟ್ ರಾಜಕಾರಣ ಅನಿವಾರ್ಯ. ಬಿಜೆಪಿ ಅವರಿಂದಾಗಿ ನಾವು ರೆಸಾರ್ಟ್ ರಾಜಕಾರಣಕ್ಕಾಗಿ ಬರಬೇಕಾಯಿತು. ಕಾಂಗ್ರೆಸ್ ನಾಯಕರೆಲ್ಲಾ ಒಟ್ಟಾಗಿ ನಾವು ಸೇರಿದ್ದು, ಸಭೆ ನಡೆಸಿ ಕ್ಷೇತ್ರದ ಅಭಿವೃದ್ಧಿ, ಬಜೆಟ್ ಚರ್ಚಿಸುತ್ತೇವೆ. ಅಲ್ಲದೇ ಲೋಕಸಭಾ ಚುನಾವಣೆ ತಯಾರಿ ಕುರಿತು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇವತ್ತಿನ ರಾಜಕಾರಣದಲ್ಲಿ ನೈತಿಕತೆ ಹೊರಟು ಹೋಗಿದೆ, ರಾಜಕೀಯವಾಗಿ ನಾವು ಉಳಿಯಲು ಇದು ಅನಿವಾರ್ಯವಾಗಿದೆ. ಬಿಜೆಪಿ ಪ್ರತಿದಿನ ಅಪರೇಷನ್ ಕಮಲ ನಡೆಸುತ್ತಿದೆ. ಆದರೆ ನಾವು ಆ ರೀತಿಯ ಮಾರ್ಗ ಹಿಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಶುಕ್ರವಾರ ಕರೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾದ ನಾಲ್ವರು ಶಾಸಕರಿಗೆ ನೋಟಿಸ್ ನೀಡಲಾಗುವುದು. ಬೇರೆ ಎಲ್ಲ ಶಾಸಕರು ನಮ್ಮ ಜೊತೆಯಲ್ಲಿದ್ದಾರೆ ಎಂದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಈಗಲ್ಟನ್ ಹಾಗೂ ವಂಡರ್ ಲಾದಲ್ಲಿರುವ ಕೈ ನಾಯಕರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಇದಕ್ಕಾಗಿ ಎಲ್ಲ ಶಾಸಕರನ್ನು ಮಧ್ಯಾಹ್ನ ಒಂದುಗೂಡಲು ತಿಳಿಸಿದ್ದು ಊಟದ ಬಳಿಕ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಎಲ್ಲ ಶಾಸಕರು ಹಾಜರಿರುವಂತೆ ತಿಳಿಸಿದ್ದಾರೆ.