ಬೆಂಗಳೂರು, ಜ.18-ಸಿದ್ದಗಂಗಾ ಮಠಾಧೀಶರಾದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಒತ್ತಾಯಿಸಿದರು.
ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್(ಅಸ್ಥಿಮಜ್ಜೆ) ಘಟಕದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಶ್ರೀಗಳಿಗೆ ಭಾರತರತ್ನ ನೀಡುವಂತೆ ಪತ್ರ ಬರೆಯುವುದಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿಯವರನ್ನು ಖುದ್ದು ಭೇಟಿ ಮಾಡಿ ಮನವಿ ಮಾಡುವುದಾಗಿಯೂ ಹೇಳಿದರು.
ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಿದರೆ ಪ್ರಶಸ್ತಿಗೂ ನಿಜವಾದ ಅರ್ಥ ಬರಲಿದೆ ಎಂದರು.
2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅಂದಿನ ರಾಷ್ಟ್ರಪತಿಗಳು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಕೋರಲಾಗಿತ್ತು. ಆನಂತರ ಬಂದ ಸರ್ಕಾರಗಳು ಕೂಡ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರಗಳನ್ನು ಬರೆದಿವೆ ಎಂದು ಹೇಳಿದರು.
ಸಿದ್ದಗಂಗಾ ಶ್ರೀಗಳು ಪವಾಡ ಪುರುಷರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದಾಗಿ ವೈದ್ಯರು ಹೇಳಿದ್ದಾರೆ.ಹಿರಿಯ ವೈದ್ಯರು ಅವರ ಆರೋಗ್ಯವನ್ನು ತಪಾಸಣೆಗೊಳಪಡಿಸಿದ್ದಾರೆ.ಅಲ್ಲದೆ, ವೈದ್ಯರ ತಂಡ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ನಾಡಿನ ಜನರ ಆಶಯದಂತೆ ಅವರ ಆರೋಗ್ಯದಲ್ಲಿ ಚೇತರಿಕೆಯಾಗಬೇಕು ಎಂದು ಹಾರೈಸಿದರು.