ಪಕ್ಷಕ್ಕೆ ಮೋಸ ಮಾಡುವುದಿಲ್ಲ ಶಾಸಕ ಅಜಯ್ ಸಿಂಗ್

ಬೆಂಗಳೂರು,ಜನವರಿ,16-ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಜಯ್ ಸಿಂಗ್, ಸಂಕ್ರಾಂತಿ ಹಬ್ಬದ ಸಲುವಾಗಿ ಕುಟುಂಬದ ಸದಸ್ಯರ ಜತೆ ಪ್ರವಾಸ ಹೋಗಿದ್ದೆ. ಇತ್ತೀಚೆಗೆ ಬಿಜೆಪಿಯ ಯಾವ ಮುಖಂಡರೂ ನನ್ನನ್ನು ಸಂಪರ್ಕಿಸಿಲ್ಲ. ಮೈತ್ರಿ ಸರ್ಕಾರದ ಆರಂಭದಲ್ಲಿ ನನ್ನನ್ನು ಸಂಪರ್ಕಿಸಿದ್ದರು.ಆದರೆ, ತಾವು ಕಾಂಗ್ರೆಸ್ ಬಿಟ್ಟು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ.ಅನಂತರ ನನ್ನನ್ನು ಬಿಜೆಪಿಯ ಯಾವ ನಾಯಕರೂ ಸಂಪರ್ಕಿಸಿಲ್ಲ ಎಂದು ಹೇಳಿದರು.

ನಮ್ಮ ತಂದೆ ಧರ್ಮಸಿಂಗ್ 1969ರಿಂದಲೂ ಕಾಂಗ್ರೆಸ್‍ನಲ್ಲೇ ಇದ್ದಾರೆ.1977ರಲ್ಲಿ ಕಾಂಗ್ರೆಸ್ ಹಿಬ್ಬಾಗವಾದಾಗಲೂ ನನ್ನ ತಂದೆ ಪಕ್ಷ ಬಿಟ್ಟಿಲ್ಲ. ಮೂಲಕಾಂಗ್ರೆಸ್‍ನಲ್ಲೇ ಉಳಿದು 50 ವರ್ಷ ಕಾಲ ಪಕ್ಷ ಸಂಘಟನೆ ಮಾಡಿದ್ದಾರೆ.ನಮ್ಮ ಇಡೀ ಕುಟುಂಬ ಕಾಂಗ್ರೆಸ್ ಜತೆಗಿದೆ.ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಪಕ್ಷ ಬಿಡುವ ಪ್ರಶ್ನೆ ಇಲ್ಲ ಎಂದು ಹೇಳಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ.ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬೇಸರ ಇರುವುದು ನಿಜ. ಆದರೆ, ಅದಕ್ಕಾಗಿ ಪಕ್ಷಕ್ಕೆ ಮೋಸ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕರ ಜತೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಇಂದು ಬೆಂಗಳೂರಿನ ಕುಮಾರಕೃಪಾದಲ್ಲಿ ಪಕ್ಷದ ವರಿಷ್ಠರನ್ನು ಖುದ್ದಾಗಿ ಭೇಟಿ ಮಾಡುತ್ತೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ