ಬೆಂಗಳೂರು, ಜ.16- ಮುಂಬೈನ ರೆಸಾರ್ಟ್ನಲ್ಲಿರುವ ಶಾಸಕರ ಪೈಕಿ ಮೂರ್ನಾಲ್ಕು ಮಂದಿ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದರು. ಬಿಜೆಪಿಗೆ ಹೋಗಲು ಮಾನಸಿಕವಾಗಿ ಸಿದ್ಧರಿದ್ದಾರೆ.ಉಳಿದಂತೆ ಒಂದಿಬ್ಬರು ಶಾಸಕರು ಅವಕಾಶ ಸಿಕ್ಕರೆ ಬಿಜೆಪಿಗೆ ಹೋಗುವುದು.ಇಲ್ಲವಾದರೆ ಕಾಂಗ್ರೆಸ್ನಲ್ಲೇ ಮುಂದುವರೆಯುವ ಡೋಲಾಯಮಾನ ಮನಸ್ಥಿತಿಯಲ್ಲಿದ್ದಾರೆ.
ಆದರೆ, ಬಿಜೆಪಿ ನಾಯಕರು ತಮ್ಮ ಕಾರ್ಯತಂತ್ರವೇನು ಎಂಬುದನ್ನು ಸ್ಪಷ್ಟವಾಗಿ ಹೇಳದೆ ಕಾದು ನೋಡುವಂತೆ ಹೇಳುತ್ತಿದ್ದು, ಈಗಾಗಲೇ ವಾರದಿಂದ ಮನೆ, ಮಠ, ಕ್ಷೇತ್ರ ಬಿಟ್ಟು ಹೋಟೆಲ್ನಲ್ಲಿ ತಂಗಿರುವ ಶಾಸಕರು ಸಿಡಿಮಿಡಿಗೊಳ್ಳುತ್ತಿದ್ದು, ಸರ್ಕಾರ ರಚನೆ ಮಾಡುವುದಾದರೆ ಬೇಗ ಮಾಡಿ.ಇಲ್ಲವಾದರೆ ನಮ್ಮ ಪಾಡಿಗೆ ನಾವು ವಾಪಸ್ ಹೋಗುತ್ತೇವೆ ಎಂಬ ದಮ್ಕಿ ಹಾಕಿದ್ದಾರೆ ಎಂದು ಹೇಳಲಾಗಿದೆ.
ಕುಟುಂಬ ಸದಸ್ಯರ ಜತೆಗೂ ಸಂಪರ್ಕಕ್ಕೆ ಸಿಗದಂತೆ ಸಿಮ್ಗಳನ್ನು ಬದಲಾಯಿಸಿ ಶಾಸಕರನ್ನು ಗೃಹ ಬಂಧನದಲ್ಲಿಡಲಾಗಿದೆ. ಹೀಗಾಗಿ ಹೊರಗಿನ ಬೆಳವಣಿಗೆಗಳ ಬಗ್ಗೆ ಯಾವ ಶಾಸಕರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಕಾಂಗ್ರೆಸ್ನ ಎಷ್ಟು ಮಂದಿ ಶಾಸಕರು ಬಿಜೆಪಿ ಜತೆ ಇದ್ದಾರೆ ಎಂಬುದೂ ಅತೃಪ್ತರಿಗೆ ಲೆಕ್ಕ ಸಿಕ್ಕಿಲ್ಲ.
ಬಿಜೆಪಿ ಸರ್ಕಾರ ರಚನೆ ಮಾಡೇ ತೀರುತ್ತೇ.ನಿಮ್ಮನ್ನು ಸಚಿವರನ್ನಾಗಿ ಮಾಡೇ ಮಾಡುತ್ತೇವೆ ಎಂಬ ಆಶ್ವಾಸನೆ ನೀಡುತ್ತಲೇ ಕಾಲ ಹರಣ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಅತೃಪ್ತ ಶಾಸಕರು ಸಿಡಿದೆದ್ದು, ನಿಮ್ಮ ಬಳಿ ಎಷ್ಟು ಮಂದಿ ಶಾಸಕರಿದ್ದಾರೆ ಮತ್ತು ನಿಮ್ಮ ಕಾರ್ಯತಂತ್ರ ಏನು ಎಂಬುದನ್ನು ತಿಳಿಸಬೇಕು. ಇಲ್ಲವಾದರೆ ಕೇವಲ ಭರವಸೆಯ ಮಾತುಗಳನ್ನು ನಂಬಿ ನಮ್ಮ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಲು ನಾವು ಸಿದ್ಧರಿಲ್ಲ. ಈಗಾಗಲೇ ನಮ್ಮ ಕ್ಷೇತ್ರದ ಜನ ತಪ್ಪು ತಿಳಿದುಕೊಂಡಿರುತ್ತಾರೆ.ವಾಪಸ್ ಹೋಗುವುದಾದರೆ ಸಚಿವರಾಗಿ ಹೋಗಬೇಕು.ಏನೂ ಆಗದೆ ಬರಿ ಕೈನಲ್ಲಿ ಹೋದರೆ ಜನ ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಶಾಸಕರು ಅಳಲು ತೋಡಿಕೊಂಡಿದ್ದು, ಬಿಜೆಪಿ ಏನು ಮಾಡುತ್ತಿದೆ, ಸರ್ಕಾರ ರಚನೆ ಪ್ರಯತ್ನ ಯಾವ ಹಂತದಲ್ಲಿದೆ ಎಂಬುದು ಸ್ಪಷ್ಟವಾಗಿ ತಿಳಿಸಬೇಕು.ಇಲ್ಲವಾದರೆ ನಮ್ಮ ಪಾಡಿಗೆ ನಮ್ಮನ್ನು ಬಿಡಿ. ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ನಾವು ಮತ್ತೆ ವಾಪಸ್ ಬರುತ್ತೇವೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.
ಮುಂಬೈನ ಖಾಸಗಿ ಹೋಟೆಲ್ನಲ್ಲಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಉಮೇಶ್ ಜಾದವ್, ಮಹೇಶ್ ಕುಮಟಹಳ್ಳಿ ಅವರುಗಳ ಪೈಕಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ಗೆ ರಾಜೀನಾಮೆ ನೀಡಲು ಮಾನಸಿಕವಾಗಿ ಸಿದ್ಧರಿದ್ದು, ಉಮೇಶ್ ಜಾದವ್ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಲು ತಯಾರಾಗಿದ್ದಾರೆ.
ಇನ್ನು ನಾಗೇಂದ್ರ ಅವರು ಗಣಿ ಹಗರಣದಲ್ಲಿ ಸಿಬಿಐ ತನಿಖೆ ಎದುರಿಸಬೇಕಿದ್ದು, ಕಾನೂನಾತ್ಮಕ ತೊಡಕುಗಳು ನಿವಾರಣೆ ಆಗುವುದಾದರೆ ಬಿಜೆಪಿಗೆ ಸೇರುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ, ಮಹೇಶ್ಕುಮಟಹಳ್ಳಿ ಅವರು ಗೊಂದಲದಲ್ಲಿದ್ದು, ಬಿಜೆಪಿಗೆ ಹೋಗಬೇಕೋ ಬೇಡವೋ ಎಂಬ ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.
ಈ ವೇಳೆ ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಬಿಜೆಪಿ ಪಕ್ಷದಿಂದ ಗೆದ್ದು ಬರುವ ವಿಶ್ವಾಸ ಇಲ್ಲ ಎಂಬ ಆತಂಕವನ್ನು ಅತೃಪ್ತ ಶಾಸಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಸರ್ಕಾರ ರಚಿಸಿದರೆ ಮಾತ್ರ ತಾವು ರೆಸಾರ್ಟ್ನಲ್ಲೇ ಉಳಿಯುತ್ತೇವೆ. ಇಲ್ಲವಾದರೆ ನಮ್ಮನ್ನು ಬಿಟ್ಟು ಬಿಡಿ ನಾವು ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.