ಬೆಂಗಳೂರು,ಜ.16- ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದ ಬಿಜೆಪಿಯ ಆಪರೇಷನ್ ಕಮಲ ಬಹುತೇಕ ವಿಫಲವಾಗುವ ಹಂತ ತಲುಪಿದೆ.
ಕಳೆದೆರಡು ದಿನಗಳಿಂದ ಕಾಂಗ್ರೆಸ್ಗೆ ಕೈ ಕೊಟ್ಟು ನಿಗೂಢ ಸ್ಥಳದಲ್ಲಿದ್ದ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್, ಕಂಪ್ಲಿಯ ಜೆ.ಗಣೇಶ್, ಅಮರೇಗೌಡ ಬಯ್ಯಾಪುರ ದಿಢೀರನೇ ಬೆಂಗಳೂರಿಗೆ ಆಗಮಿಸಿರುವುದರಿಂದ ಆಪರೇಷನ್ ಕಮಲ ಬಿಜೆಪಿಗೆ ತಿರುಗುಬಾಣವಾಗಿದೆ.
ಏಕೆಂದರೆ ಇದರಲ್ಲಿ ಭೀಮಾನಾಯಕ್ ಮತ್ತು ಜೆ.ಗಣೇಶ್ ಬಹುತೇಕ ಆಪರೇಷನ್ ಕಮಲಕ್ಕೆ ಒಳಗಾಗಿದ್ದರು. ಈ ಇಬ್ಬರನ್ನು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಮೂಲಕವೇ ಬಿಜೆಪಿ ಸೆಳೆಯುವ ಪ್ರಯತ್ನ ಮಾಡಿತ್ತು.
ಇದಕ್ಕೆ ಪುಷ್ಟಿ ನೀಡುವಂತೆ ಈ ಇಬ್ಬರು ಶಾಸಕರ ದೂರವಾಣಿ ಕರೆಗಳು ಇದ್ದಕ್ಕಿದ್ದಂತೆ ಕಡಿತಗೊಂಡು ಹಾಗೂ ಯಾರ ಸಂಪರ್ಕಕ್ಕೂ ಸಿಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
ಆದರೆ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಶಾಸಕರನ್ನು ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.
ಸದ್ಯಕ್ಕೆ ಮುಂಬೈನಲ್ಲಿ ಇಬ್ಬರು ಪಕ್ಷೇತರ ಶಾಸಕರು ಸೇರಿದಂತೆ ಆರು ಶಾಸಕರು ವಾಸ್ತವ್ಯ ಹೂಡಿದ್ದಾರೆ. ಬೆಳಗಾವಿಯ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಚಿಂಚೋಳಿಯ ಡಾ.ಉಮೇಶ್ ಜಾಧವ್, ಬಳ್ಳಾರಿಯ ಬಿ.ನಾಗೇಂದ್ರ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಇದ್ದಾರೆಂದು ಹೇಳಲಾಗುತ್ತಿದೆ.
ಇದರಲ್ಲಿ ಪ್ರತಾಪ್ ಗೌಡ ಪಾಟೀಲ್ ನಡೆ ಈಗಲೂ ನಿಗೂಢವಾಗಿದ್ದು, ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸದ್ಯಕ್ಕಂತೂ ಆಪರೇಷನ್ ಕಮಲ ಮತ್ತೆ ಹಿನ್ನೆಡೆಯಾಗುವ ಲಕ್ಷಣಗಳು ಸ್ಪಷ್ಟವಾಗಿದೆ.ನಿನ್ನೆಯಿಂದಲೂ ಶಾಸಕರೆಲ್ಲರಿಗೂ ಸಿಹಿ ಸುದ್ದಿ ಕೊಡುತ್ತೇನೆಂದು ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದರಾದರೂ ಈವರೆಗೂ ಅದನ್ನು ಬಹಿರಂಗಪಡಿಸುತ್ತಿಲ್ಲ.
ಮುಂಬೈ ಹಾಗೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಬಿಎಸ್ವೈ ಗಮನಿಸುತ್ತಿದ್ದಾರೆ.ಶಾಸಕರಿಗೂ ಕೂಡ ಗುಟ್ಟು ರಟ್ಟು ಮಾಡುತ್ತಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದು ಯಾರೊಬ್ಬರಿಗೂ ತಿಳಿಯದಿರುವುದು ಗೊಂದಲಗಳನ್ನು ಸೃಷ್ಟಿಸಿದೆ.