ಮುಂಜಾನೆ ಶಬರಿಮಲೆ ಪ್ರವೇಶಕ್ಕೆ ಮುಂದಾದ ಇಬ್ಬರು ಮಹಿಳೆಯರು; ಮತ್ತೆ ಭುಗಿಲೆದ್ದ ಪ್ರತಿಭಟನೆ

ತಿರುವನಂತಪುರಂ : ಕಳೆದ ವಾರವಷ್ಟೆ ಕನಕದುರ್ಗ ಮತ್ತು ಬಿಂದು ಅಮ್ಮಿನಿ ಎಂಬ ಇಬ್ಬರು ಮಹಿಳೆಯರು ಶಬರಿಮಲೆಯನ್ನು ಪ್ರವೇಶಿಸಿ ಅಯ್ಯಪ್ಪಸ್ವಾಮಿ ದರ್ಶನ ಪಡೆದುಬಂದಿದ್ದು ದೇಶದೆಲ್ಲೆಡೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇಂದು ಮುಂಜಾನೆ ಇನ್ನಿಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದು, ಕೇರಳದಲ್ಲಿ ಮತ್ತೊಮ್ಮೆ ಭಾರೀ ಗಲಾಟೆಯಿದ್ದಿದೆ.

10 ವರ್ಷದಿಂದ 50 ವರ್ಷದೊಳಗಿನ ಮಹಿಳೆಯರಿಗೆ ಕೂಡ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯಬಹುದು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿರುವ ಸುಪ್ರೀಂಕೋರ್ಟ್​ ಅಲ್ಲಿಯವರೆಗೂ ಮೊದಲ ತೀರ್ಪನ್ನು ಅನುಕರಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹಿಂದು ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಹಲವು ಮಹಿಳೆಯರು ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದರು. ಆದರೆ, ಅದರಲ್ಲಿ ಇಬ್ಬರು ಯಶಸ್ವಿಯಾಗಿದ್ದರು. ಅದಕ್ಕೂ ಮೊದಲು ಮೂವರು ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದಾರೆ ಎಂದು ಕೇರಳ ಪೊಲೀಸರು ತಿಳಿಸಿದ್ದರು. ಅಲ್ಲಿಗೆ ಇದುವರೆಗೆ 5 ಮಹಿಳೆಯರು ಶಬರಿಮಲೆಯನ್ನು ಪ್ರವೇಶಿದಂತಾಗಿದೆ.

ಇಂದು ಮುಂಜಾನೆ ಶಬರಿಮಲೆ ಪಂಪ ಬೇಸ್​ ಕ್ಯಾಂಪ್​ನಿಂದ ಬೆಟ್ಟವೇರಲು ಪ್ರಯತ್ನಿಸಿದ ಇಬ್ಬರು ಮಹಿಳೆಯರ ವಿರುದ್ಧ ಕೇರಳದ ಶಬರಿಮಲೆಯಲ್ಲಿ ಭಾರೀ ಪ್ರತಿಭಟನೆ ಎದ್ದಿದೆ. ಮತ್ತೊಮ್ಮೆ ಶಬರಿಮಲೆ ವಿವಾದ ಭುಗಿಲೆದ್ದಿದ್ದು, ಬೇಸ್​ ಕ್ಯಾಂಪ್​ನಿಂದ 1 ಕಿ.ಮೀ. ಮುಂದೆ ಹೋಗಿದ್ದ ಆ ಇಬ್ಬರು ಮಹಿಳೆಯರನ್ನು ಸುತ್ತುವರೆದಿರುವ ಪ್ರತಿಭಟನಾಕಾರರು ಗಲಾಟೆಯೆಬ್ಬಿಸಿದ್ದಾರೆ.  ಬಳಿಕ, ಇಬ್ಬರು ಮಹಿಳೆಯರನ್ನು ಪೊಲೀಸರು ಭದ್ರತೆ ಮೂಲಕ ತಮ್ಮ ವಾಹನದಲ್ಲಿ ಕರೆತಂದಿದ್ದಾರೆ.

ತಾವು ಕೂಡ 41 ದಿನಗಳ ವ್ರತವನ್ನು ಪೂರ್ಣಗೊಳಿಸಿರುವುದಾಗಿ ಹೇಳಿರುವ ಇಬ್ಬರು ಮಹಿಳೆಯರು ಅಯ್ಯಪ್ಪಸ್ವಾಮಿ ದರ್ಶನ ಪಡೆಯದೆ ವಾಪಾಸ್​ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಒಂಭತ್ತು ಜನರ ಗುಂಪಿನೊಂದಿಗೆ ಬಂದಿದ್ದ ಆ ಇಬ್ಬರು ಮಹಿಳೆಯರು ಬೇರೆಯವರಿಗಿಂತ ಸ್ವಲ್ಪ ಮುಂದೆ ಸಾಗಿದ್ದರು. ಉಳಿದವರು ಅವರನ್ನು ಹಿಂಬಾಲಿಸಿ ಬೆಟ್ಟ ಹತ್ತುತ್ತಿದ್ದರು ಎನ್ನಲಾಗಿದೆ. ಆದರೆ, ಅಷ್ಟರಲ್ಲಾಗಲೇ ವಿಷಯ ತಿಳಿದ ಪ್ರತಿಭಟನಾಕಾರರು ಅಡ್ಡಗಟ್ಟಿದ್ದು, ಬೆಟ್ಟವನ್ನೇರಲು ಅವಕಾಶ ನೀಡಲು ನಿರಾಕರಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ