ಬೆಂಗಳೂರು, ಜ.15-ಕಳೆದ ಮೂರು-ನಾಲ್ಕು ದಿನಗಳಿಂದಲೂ ರಾಜ್ಯದ ರಾಜಕೀಯದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಆಪರೇಷನ್ ಕಮಲದ ಭೀತಿ ಎದುರಾಗಿದೆ.ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ನಿಗಮ-ಮಂಡಳಿ ನೇಮಕವನ್ನು ಮತ್ತಷ್ಟು ವಿಳಂಬ ಮಾಡಲು ನಿರ್ಧರಿಸಿದ್ದಾರೆಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಜೆಡಿಎಸ್ನಿಂದ ನಿಗಮ-ಮಂಡಳಿಗಳಿಗೆ ಸಂಕ್ರಾಂತಿ ಹಬ್ಬದ ನಂತರ ನೇಮಕ ಮಾಡಲಾಗುವುದು ಎಂದು ಹೇಳಲಾಗಿತ್ತು. ಪಕ್ಷದ ಶಾಸಕರು ಹಾಗೂ ಮುಖಂಡರಿಗೆ ಸಂಕ್ರಾಂತಿ ಹಬ್ಬದ ನಂತರ ನಿಗಮ-ಮಂಡಳಿ ನೇಮಕದಲ್ಲಿ ಸ್ಥಾನ ಕಲ್ಪಿಸುವ ಭರವಸೆಯನ್ನು ನೀಡಲಾಗಿತ್ತು.
ಜ.17ರಂದು ನಡೆಯುವ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶದ ನಂತರವಷ್ಟೇ ನಿಗಮ-ಮಂಡಳಿಗಳ ನೇಮಕಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ನಡುವೆ ಆಪರೇಷನ್ ಕಮಲದ ಪ್ರಯತ್ನದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ಜೆಡಿಎಸ್ ಮುಖಂಡರು ಕೂಡ ಗೊಂದಲಕ್ಕೆ ಒಳಗಾಗಿದ್ದಾರೆ.ಸದ್ಯಕ್ಕೆ ನಿಗಮ-ಮಂಡಳಿಗಳ ಆಕಾಂಕ್ಷಿಗಳಾಗಿದ್ದವರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.