ನಮಗೆ ಕಾಯಿಲೆಯಿಲ್ಲದೆ ಇರುವುದರಿಂದ ಆಪರೇಷನ್ ಅಗತ್ಯವಿಲ್ಲ ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು, ಜ.15- ನಮಗೆ ಕಾಯಿಲೆ ಇಲ್ಲ. ಹಾಗಾಗಿ ಯಾವುದೇ ಆಪರೇಷನ್ ನಮಗೆ ಅಗತ್ಯವಿಲ್ಲ. ಅದೆಲ್ಲ ಇರೋದು ಕಾಂಗ್ರೆಸ್-ಜೆಡಿಎಸ್‍ನವರಿಗೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದರು.

ತುಮಕೂರು ರಸ್ತೆಯಲ್ಲಿ ನಿರ್ಮಾಣವಾಗಿರುವ ಪ್ರಕ್ರಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಲೋಕಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರವರ ಮನೆಯ ಮಕ್ಕಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು.ಆ ಯೋಗ್ಯತೆ ಕಾಂಗ್ರೆಸ್-ಜೆಡಿಎಸ್‍ನವರಿಗೆ ಇಲ್ಲ. ಇದನ್ನೆಲ್ಲಾ ಬಿಟ್ಟು ಆಪರೇಷನ್ ಕಮಲ ಎಂದು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಖಾರವಾಗಿ ನುಡಿದರು.

ದೆಹಲಿಯಲ್ಲಿ ಆರಪೇಷನ್ ಕಮಲಕ್ಕೆ ಸಿದ್ಧತೆ ನಡೆದಿದೆ ಎಂದು ಮಾಧ್ಯಮಗಳಿಂದ ತಿಳಿದುಕೊಂಡೆ. ಅಲ್ಲಿ ಬಿಜೆಪಿಯ ರಾಷ್ಟ್ರೀಯ ಪರಿಷತ್ ನಡೆದಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಸಂಬಂಧ ಚೆನ್ನಾಗಿಲ್ಲ. ರಾಜಕೀಯ ರಾದ್ಧಾಂತ ನಡೆಯುತ್ತಿದೆ. ಡಿವೋರ್ಸ್ ಹಂತ ತಲುಪಿದೆ ಎಂಬ ವಿಷಯ ಗೊತ್ತಾಯಿತು. 104 ಸದಸ್ಯ ಬಲವಿರುವ ದೊಡ್ಡ ಪಕ್ಷ ನಮ್ಮದು.ಜನರಿಗೆ ತೊಂದರೆಯಾಗದಂತೆ ಮತ್ತು ಬದಲಿ ವ್ಯವಸ್ಥೆ ಮಾಡಿಕೊಡುವಂತಹ ಜವಾಬ್ದಾರಿ ನಮ್ಮ ಮೇಲೂ ಇದೆ ಅಲ್ಲವೆ ಎಂದು ಮಾರ್ಮಿಕವಾಗಿ ನುಡಿದರು.

37 ಶಾಸಕರನ್ನು ಹೊಂದಿರುವವರು ರಾಜ್ಯ ಆಳುತ್ತಾರೆ ಎಂದಾದರೆ 104 ಮಂದಿ ಇರುವವರು ಏಕೆ ಆಡಳಿತ ಮಾಡಬಾರದು ಎಂದು ಮಾಧ್ಯಮದವರನ್ನೇ ಡಿವಿಎಸ್ ಪ್ರಶ್ನಿಸಿದರು.

ನಿಮ್ಮ ಶಾಸಕರನ್ನು ರೆಸಾರ್ಟ್‍ನಲ್ಲಿ ಇಟ್ಟಿದ್ದೀರಾ ಎಂಬ ವರದಿಗಾರರ ಪ್ರಶ್ನೆಗೆ , ನಮ್ಮ ಕೆಲವು ತೀರ್ಮಾನಗಳನ್ನು ನಿಮ್ಮ ಮುಂದೆ ಹೇಳುವುದಕ್ಕಾಗುವುದಿಲ್ಲ. ಸಮಯ ಬಂದಾಗ ಹೇಳುತ್ತೇನೆ. ಎಲ್ಲವನ್ನೂ ನಿಮಗೆ ಹೇಳಿಬಿಟ್ಟರೆ ನಮ್ಮ ಪ್ಲಾನ್ ಸಕ್ಸಸ್ ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್- ಜೆಡಿಎಸ್‍ನವರು ಏನು ಮಾಡಲೂ ಹೇಸುವುದಿಲ್ಲ. ಅವರವರೇ ಕಚ್ಚಾಡಿಕೊಂಡು ಬಿದ್ದುಬಿಟ್ಟರೆ ನಾವು ಸರ್ಕಾರ ರಚಿಸುವುದರಲ್ಲಿ ತಪ್ಪಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಒಂದೇ ಕಡೆ ಇರಲಿ ಎಂಬ ಉದ್ದೇಶದಿಂದ ಅಲ್ಲಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಸದಾನಂದಗೌಡ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ