ಬೆಂಗಳೂರು, ಜ.14- ಕಾಂಗ್ರೆಸ್‍ನ ಶಾಸಕರಿಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಏರ್ಪಡಿಸಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕಾಂಗ್ರೆಸ್‍ನ ಶಾಸಕರು ಎಲ್ಲೂ ಹೋಗಿಲ್ಲ. ಬಿಜೆಪಿಯವರ ಜೊತೆ ಹೋಗಿದ್ದಾರೆ ಎಂಬುದು ನಿಮಗೆ ಹೇಗೆ ಗೊತ್ತು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ.
ಇಂದು ಉಪಹಾರ ಕೂಟದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದು, ಪರಿಸ್ಥಿತಿ ಗಂಭೀರತೆಯನ್ನು ಹೆಚ್ಚಿಸಿತ್ತು.ಈ ಮೊದಲು ನಡೆದ ಸಚಿವರ ಉಪಹಾರ ಕೂಟದಲ್ಲಿ ಸಿದ್ದರಾಮಯ್ಯನವರು ಭಾಗವಹಿಸಿರಲಿಲ್ಲ.
12ಕ್ಕೂ ಹೆಚ್ಚು ಮಂದಿ ಶಾಸಕರು ಆಪರೇಷನ್ ಕಮಲದ ಸುಳಿಯಲ್ಲಿ ಸಿಲುಕಿದ್ದು ಅವರನ್ನು ರಕ್ಷಿಸಿಕೊಳ್ಳಲು ಹೈಕಮಾಂಡ್ ನಾಯಕರು ರಂಗ ಪ್ರವೇಶ ಮಾಡಿದ್ದಾರೆ.ಮುಂಬೈನ ಹೊಟೇಲ್‍ನಲ್ಲಿ ತಂಗಿರುವ ರಮೇಶ್‍ಜಾರಕಿಹೊಳಿ, ಉಮೇಶ್‍ಜಾಧವ್, ನಾಗೇಂದ್ರ ಅವರನ್ನು ಎಐಸಿಸಿ ಹಿರಿಯ ನಾಯಕ ಸಂಜಯ್ ನಿರುಪಮ್ ಅವರು ಖುದ್ದಾಗಿ ಭೇಟಿ ಮಾಡಿ ಬೆಂಗಳೂರಿಗೆ ವಾಪಸ್ ತೆರಳುವಂತೆ ತಾಕೀತು ಮಾಡಿದ್ದಾರೆ.
ಅದಕ್ಕೆ ಒಪ್ಪದ ಮೂವರು ಶಾಸಕರು ತಮಗೆ ಪಕ್ಷದಲ್ಲಿ ಮನ್ನಣೆ ಸಿಗುತ್ತಿಲ್ಲ. ನಮ್ಮ ಯಾವ ಕೆಲಸಗಳೂ ನಡೆಯುತ್ತಿಲ್ಲ. ಆಡಳಿತ ಪಕ್ಷದ ಶಾಸಕರಾಗಿದ್ದರೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸಾಲ, ಸೋಲ ಮಾಡಿ ಚುನಾವಣೆ ಎದುರಿಸಿದ್ದೇವೆ. ಪಕ್ಷದಲ್ಲಿ ನಮಗೆ ಮನ್ನಣೆ ಸಿಗದಿದ್ದರೆ ಇಲ್ಲಿದ್ದು ಏನು ಪ್ರಯೋಜನವಿದೆ. ಬಿಜೆಪಿಯವರು ನಮ್ಮ ಆರ್ಥಿಕ ಮುಗ್ಗಟ್ಟು ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಹಾಗಾಗಿ ತಾವು ಬಿಜೆಪಿಗೆ ಹೋಗುವುದು ಶತಸಿದ್ಧ ಎಂಬ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಕೊನೆಯ ಹಂತದ ರಾಜೀ ಸಂಧಾನವಾಗಿ ಕಾಂಗ್ರೆಸ್ ಶಾಸಕರ ಸಾಲ ಹೊರೆ ಇಳಿಸುವ ಭರವಸೆ ನೀಡಿದೆ ಎನ್ನಲಾಗಿದೆ.ನೀವು ಬೇರೆ ನಿರ್ಧಾರ ಮಾಡಬೇಡಿ. ನಿಮ್ಮ್ಝೆಲ್ಲ ಕಷ್ಟ-ನಷ್ಟಗಳಿಗೆ ಕಾಂಗ್ರೆಸ್ ಜೊತೆಯಲ್ಲಿರುತ್ತದೆ ಎಂದು ಭರವಸೆ ನೀಡಿದ್ದು, ಅದಕ್ಕೆ ತಕ್ಕಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ..ಶಿವಕುಮಾರ್ ಅವರು ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಮೂರು ಮಂದಿ ಶಾಸಕರು ಮುಂಬೈನ ಖಾಸಗಿ ಹೊಟೇಲ್‍ನಲ್ಲಿದ್ದು, ಉಳಿದಂತೆ ಆನಂದ್‍ಸಿಂಗ್, ಭೀಮಾನಾಯ್ಕ್, ಪ್ರತಾಪ್‍ಗೌಡ ಪಾಟೀಲ್, ಗಣೇಶ್ ಹುಕ್ಕೇರಿ, ಡಾ.ಸುಧಾಕರ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಪಕ್ಷೇತರ ಶಾಸಕರಾದ ಶಂಕರ್, ನಾಗೇಶ್ ಅವರುಗಳು ಆಪರೇಷನ್ ಕಮಲದ ಸುಳಿಯಲ್ಲಿ ಸಿಲುಕಿದ್ದು, ಇದಲ್ಲದೆ, ಜೆಡಿಎಸ್‍ನ ಮೂವರು ಶಾಸಕರೂ ಕೂಡ ಬಿಜೆಪಿಯವರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಎದುರಾಗಿದ್ದು, ಕಾಂಗ್ರೆಸ್ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಹೈಕಮಾಂಡ್ ನಾಯಕರು ಅಖಾಡಕ್ಕಿಳಿದಿದ್ದಾರೆ. ಒಂದು ವೇಳೆ ನೇರವಾಗಿ ಸಂಧಾನಕ್ಕೆ ಒಪ್ಪದಿದ್ದರೆ ಕಾನೂನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಶಾಸಕರನ್ನು ಬೆದರಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ.
ಇದಕ್ಕೆ ಪೂರಕವೆಂಬಂತೆ ಶಾಸಕರ ಕಾಲ್ ರೆಕಾರ್ಡ್, ಲೋಕೇಷನ್ ಸೆಟ್ಟಿಂಗ್ ಮತ್ತು ಯಾರ್ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಗಳನ್ನು ಕಾಂಗ್ರೆಸ್ ನಾಯಕರು ಕಲೆ ಹಾಕುತ್ತಿದ್ದು, ಪರಿಸ್ಥಿತಿ ತಿಳಿಗೊಳ್ಳದೆ ಇದ್ದರೆ, ಕುದುರೆ ವ್ಯಾಪಾರದ ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಮುಂದಾಗಿದೆ.
ಬಿಜೆಪಿ ಸದ್ದಿಲ್ಲದೆ ಸರ್ಕಾರದ ಪತನಕ್ಕೆ ಮುಹೂರ್ತ ಇಟ್ಟಿದ್ದರೆ ಕಾಂಗ್ರೆಸ್ ಕೂಡ ತನ್ನದೇ ತಂತ್ರಗಾರಿಕೆಯಲ್ಲಿ ತಿರುಗೇಟು ನೀಡುವ ತಯಾರಿಗಳನ್ನು ನಡೆಸಿದೆ.