ಪಾಕಿಸ್ತಾನದ ಫೈಸಲಾಬಾದ್ ಯೂನಿವರ್ಸಿಟಿ ಫೆಬ್ರವರಿ 14ರಂದು ಸಿಸ್ಟರ್ಸ್ ಡೇ ಆಚರಣೆಗೆ ಕರೆ ಕೊಟ್ಟಿದೆ

ಲಾಹೋರ್, ಜ.14- ವಿಶ್ವದಾದ್ಯಂತ ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ಆಚರಣೆಗೆ ಸಜ್ಜಾಗುತ್ತಿದ್ದರೆ ಇತ್ತ ಪಾಕಿಸ್ತಾನದ ವಿಶ್ವವಿದ್ಯಾನಿಲಯವೊಂದು ಅದೇ ದಿನ ಇದಕ್ಕೆ ಪ್ರತಿಯಾಗಿ ಸಿಸ್ಟರ್ಸ್ ಡೇ (ಸಹೋದರಿಯರ ದಿನ) ಆಚರಣೆ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದೆ.
ಪಾಕಿಸ್ತಾನ ಮೂಲಭೂತವಾದಿಗಳ ರಾಷ್ಟ್ರ. ಅಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆಗೆ ತೀವ್ರ ವಿರೋಧವಿದೆ. ಆದರೂ ಅಲ್ಲಿನ ವಿಚಾರವಾದಿಗಳು ಹಾಗೂ ಕೆಲ ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ಆಚರಣೆಗೆ ಸಜ್ಜಾಗುತ್ತಿರುವಂತೆಯೇ ಇತ್ತ ಫೈಸಲಾಬಾದ್ ಯೂನಿವರ್ಸಿಟಿ ಅದಕ್ಕೆ ಪ್ರತಿಯಾಗಿ ಸಿಸ್ಟರ್ಸ್ ಡೇ ಆಚರಣೆಗೆ ಕರೆ ಕೊಟ್ಟಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಫೈಸಲಾಬಾದ್ ವಿವಿಯ ಉಪ ಕುಲಪತಿ ಜಾಫರ್ ಇಕ್ಬಾಲ್ ರಾಂಧವ ಅವರು, ದೇಶದಲ್ಲಿ ಇಸ್ಲಾಮಿಕ್ ಸಂಪ್ರದಾಯದ ಪ್ರಚಾರಕ್ಕಾಗಿ ತಮ್ಮ ವಿವಿ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಆಚರಣೆಗೆ ಪ್ರತಿಯಾಗಿ ತಾವು ಸಿಸ್ಟರ್ಸ್ ಡೇ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಅಂತೆಯೇ ವ್ಯಾಲೆಂಟೈನ್ಸ್ ಡೇ ಇಸ್ಲಾಂ ಸಂಪ್ರದಾಯಕ್ಕೆ ದೊಡ್ಡ ಆತಂಕ ತಂದೊಡ್ಡಿದ್ದು, ಇದರಿಂದ ಇಸ್ಲಾಂ ಸಂಪ್ರದಾಯವಾದಿಗಳು ಹಾದಿ ತಪ್ಪುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ