ಬೆಂಗಳೂರು,ಜ.14-ಮೀಸಲು ವಿಸ್ತರಣಾ ಕಾಯ್ದೆ ಜಾರಿ ವಿಚಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಯ್ದೆ ಜಾರಿಗೆ ಪರ-ವಿರೋಧ ವ್ಯಕ್ತವಾಗಿರುವುದು ದೋಸ್ತಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.ಕಾಯ್ದೆ ಜಾರಿಗೊಳಿಸದಿದ್ದರೆ ಎಸ್ಸಿ-ಎಸ್ಟಿ ನೌಕರರ ಸಿಟ್ಟಿಗೆ ತುತ್ತಾಗಬೇಕಾಗುತ್ತದೆ, ಕಾಯ್ದೆ ಜಾರಿಗೊಳಿಸಿದರೆ ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ಸಾಮಾನ್ಯವರ್ಗದ ನೌಕರರು ಬೀದಿಗಿಳಿದು ಹೋರಾಟ ನಡೆಸಿದರೆ ಎಂಬ ಆತಂಕ ಮನೆಮಾಡಿದ್ದು, ಕಾಯ್ದೆ ಜಾರಿ ಸಂಬಂಧ ದೋಸ್ತಿ ಸರ್ಕಾರ ಅಡಕತ್ತರಿಗೆ ಸಿಲುಕಿದೆ.
ಕಾಯ್ದೆ ಜಾರಿಗೊಳಿಸಬಾರದು ಎಂದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯವರ್ಗದ ನೌಕರರ ಒಕ್ಕೂಟ ತೀವ್ರ ಪ್ರತಿರೋಧವೊಡ್ಡುತ್ತಿದೆ.ಕಾಯ್ದೆ ಜಾರಿಗೆ ತಂದರೆ ನಮಗೆ ಅನ್ಯಾಯವಾಗಲಿದೆ. ಈ ವಿರುದ್ದ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದೆ.
ತತ್ಪರಿಣಾಮ ಮೀಸಲು ವಿಸ್ತರಣಾ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಬಾರದು ಎಂದು ಅಹಿಂಸಾ ಒಕ್ಕೂಟ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದೆ. ವಿಧಾನಸೌಧದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಮನವಿ ಪತ್ರ ಸಲ್ಲಿಸಿದ್ದಾರೆ.
ಜ. 15ಕ್ಕೆ ಬಿ.ಕೆ.ಪವಿತ್ರ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಅಲ್ಲಿಯ ತನಕ ಕಾಯ್ದೆ ಜಾರಿಯಾಗಬಾರದು.ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇತ್ತ ವಿಧಾನಸಭೆಯಲ್ಲಿ ತತ್ಪರಿಣಾಮ ಮೀಸಲು ವಿಸ್ತರಣಾ ಕಾಯ್ದೆ ಅನುಮೋದನೆಗೊಂಡು ರಾಷ್ಟ್ರಪತಿಗಳ ಸಮ್ಮತಿ ಸಿಕ್ಕಿದೆ. ಹೀಗಾಗಿ ಕಾಯ್ದೆ ಕಾನೂನಾಗಿರುವುದರಿಂದ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸುವ ಅನಿವಾರ್ಯತೆಗೂ ಒಳಗಾಗಿದೆ.
ಕಾನೂನು ಅಭಿಪ್ರಾಯಗಳು ಕಾಯ್ದೆ ಜಾರಿಗೆ ಪೂರಕವಾಗಿ ಬಂದಿರುವುದರಿಂದ ಸರ್ಕಾರದ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ ದೋಸ್ತಿ ಸರ್ಕಾರ ಕಾಯ್ದೆ ಜಾರಿ ಸಂಬಂಧ ಸಂಕೀರ್ಣತೆಯನ್ನು ಎದುರಿಸುತ್ತಿದೆ.ಕಾಯ್ದೆ ಜಾರಿಗೊಳಿಸದಿದ್ದರೆ ಎಸ್ಸಿ-ಎಸ್ಟಿ ಸಮುದಾಯದ ಆಕ್ರೋಶ, ಜಾರಿಗೊಳಿಸಿದರೆ ಹಿಂದುಳಿದ ವರ್ಗಗಳ ವಿರೋಧ ಕಟ್ಟಿಕೊಳ್ಳುವ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಎರಡೂ ವರ್ಗಗಳಿಗೆ ಅನ್ಯಾಯವಾಗದಂತೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಲು ಚಿಂತನೆ ನಡೆಸಿದೆ.